ಬೆಂಗಳೂರು, ಡಿ 11 : ಪ್ರತಿ ಪಾತ್ರಕ್ಕೊಂದು ಮುಖ, ಪ್ರತಿ ಮುಖಕ್ಕೊಂದು ಪಾತ್ರ ಇದ್ದೇ ಇರುತ್ತದೆ ಈ ನಿಟ್ಟಿನಲ್ಲಿ 'ಕೊಡೆ ಮುರುಗ'ಚಿತ್ರದ ನಾಯಕನ ಪಾತ್ರಕ್ಕೆ ಮುನಿಕೃಷ್ಣನನ್ನೇ ಆಯ್ಕೆ ಮಾಡಿಕೊಂಡೆ ಎಂದಿದ್ದಾರೆ ನಿರ್ದೇಶಕ ಸುಬ್ರಹ್ಮಣ್ಯ ಪ್ರಸಾದ್
ಮುನಿಕೃಷ್ಣ ಬೇರಾರೂ ಅಲ್ಲ, ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸಿ ಭೇಷ್ ಎನಿಸಿಕೊಂಡಿರುವ ನಟ ತೊಳೆದ ಕೆಂಡದಂತಹ ಬಣ್ಣ, ದಪ್ಪ ಮೀಸೆ ವಿಲನ್ಗೆ ಹೇಳಿಮಾಡಿಸಿದ ಲಕ್ಷಣ ಹೊಂದಿರುವ ಮುನಿಕೃಷ್ಣ ನಾಯಕನಾಗಿ ನಟಿಸಿರುವ 'ಕೊಡೆ ಮುರುಗ' ಚಿತ್ರದ ಟ್ರೇಲರ್ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ಪಡೆದಿದೆ
ಮೇಕಿಂಗ್ ಸಾಂಗ್ಸ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಮುನಿಕೃಷ್ಣ, ನಿರ್ದೇಶಕ ಸುಬ್ರಹ್ಮಣ್ಯ ಪ್ರಸಾದ್ ನಾಯಕನ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದ್ದೇನೆ ಎಂದಾಗ ಬೇಡ ನಾನು ವಿಲನ್ ಪಾತ್ರಕ್ಕೇ ಸರಿ ಎಂದಿದ್ದೆ ಆದರೆ ಕೊನೆಗೆ ಒಪ್ಪಿಕೊಂಡೆ ಎಂದರು.
ಕೆಆರ್ಕೆ ಪ್ರೊಡಕ್ಷನ್ಸ್ ಅವರ ಎರಡನೇ ಚಿತ್ರ 'ಕೊಡೆ ಮುರುಗ'ನಿಗೆ ಕೆ. ರವಿಕುಮಾರ್, ಅಶೋಕ್ ಶಿರಾಲಿ ಬಂಡವಾಳ ಹೂಡಿದ್ದಾರೆ. ಸಿನಿಮಾದೊಳಗೊಂದು ಸಿನಿಮಾನೇ ಈ ಚಿತ್ರದ ಕಥಾವಸ್ತು. ಕಾಲೆಳೆಸಿಕೊಳ್ಳುವ, ಅಪಮಾನ ಎದುರಿಸುವ ವ್ಯಕ್ತಿಯ ಪಾತ್ರದಲ್ಲಿ ಮುನಿಕೃಷ್ಣ ನಟನೆ ಅದ್ಭುತವಾಗಿದೆ ಎಂದು ನಿರ್ದೇಶಕ ಸುಬ್ರಹ್ಮಣ್ಯ ಹೇಳಿದ್ದು, ಚಿತ್ರದಲ್ಲಿಯೂ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
'ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದರೆ ತಿಪ್ಪೆ ಕೆದಕೋದು ಬಿಟ್ಟೀತಾ ಎಂಬ ಹಾಡಿಗೆ ಕೈಲಾಶ್ ಖೇರ್ ದನಿಯಾಗಿದ್ದು, ಸುಬ್ರಹ್ಮಣ್ಯ ಪ್ರಸಾದ್ ಸಾಹಿತ್ಯವಿದೆ. ತ್ಯಾಗರಾಜ್ ಸಂಗೀತ, ರವಿಚಂದ್ರನ್ ಸಂಕಲನವಿದೆ.