ಬೆಂಗಳೂರು, ಜೂ 14, ಕೆಪಿಸಿಸಿಗೆ ನೂತನ ಸಾರಥಿಯಾಗಿ ನೇಮಕಗೊಂಡಿರುವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಹೊಸ ಕಟ್ಟಡದಲ್ಲಿ ವಿಘ್ನಗಳನ್ನು ನಿವಾರಸಿಕೊಂಡು ಅಧಿಕೃತ ಕಾರ್ಯಾರಂಭ ಮಾಡಲಿದ್ದಾರೆ. ಪಕ್ಷ ಸಂಘಟನೆ, ಸುಸೂತ್ರ ಪದಗ್ರಹಣಕ್ಕಾಗಿ ಕೆಪಿಸಿಸಿ ನೂತನ ಕಚೇರಿಯ ಆಡಿಟೋರಿಯಂನಲ್ಲಿ ಗಣಪತಿ ಹೋಮ, ವಾಸ್ತು ಹೋಮಾ, ರಕ್ಷೋಜ್ಞ ಹೋಮ, ಭೂ ವರಹ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಅಷ್ಟ ಲಕ್ಷ್ಮಿ ಹೋಮ, ಗಾಯಿತ್ರಿ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ಸೇರಿದಂತೆ 8 ಬಗೆಯ ಹೋಮಗಳನ್ನು ಜ್ಯೋತಿಷ್ಯಿಗಳ ಸಲಹೆ ಮೇರೆಗೆ ಶಿವಕುಮಾರ್ ನೆರವೇರಿಸಿದ್ದಾರೆ. ಬೆಳಗ್ಗೆ 5 ಗಂಟೆಗೆ ಆರಂಭವಾದ ಹೋಮ ಬೆಳಗ್ಗೆ 11 ಗಂಟೆಗೆ ಪೂರ್ಣಾಹುತಿಯೊಂದಿಗೆ ಕೊನೆಗೊಂಡಿತು. ಭಾನುವಾರ ಬೆಳಗಿನ ಜಾವ ಜ್ಯೋತಿಷಿ ಡಾ. ನಾಗರಾಜ್ ಆರಾಧ್ಯ ಹಾಗೂ ಅರ್ಚಕ ಮಹಂತೇಶ್ ಭಟ್ ನೇತೃತ್ವದ ಮೂವರು ಅರ್ಚಕರಿಂದ ಹೋಮ ಹವನ ನೆರವೇರಿತು. ತಮಿಳುನಾಡಿನ ಅರುಣಾಚಲೇಶ್ವರ ದರ್ಶನ ಪಡೆಯುವ ಮೊದಲೇ ಡಿ.ಕೆ.ಶಿವಕುಮಾರ್ ಈ ಎಲ್ಲಾ ಹೋಮಹವನ ನೆರವೇರಿಸಿದರು.
ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಎರಡು ವರ್ಷಗಳಿಂದ ನೂತನ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿತ್ತು. ವಿಘ್ನಗಳೆಲ್ಲ ನಿವಾರಣೆಯಾಗಲೆಂದು ಶುಭ ಮೂಹೂರ್ತದಲ್ಲಿ ಪೂಜೆ ನೆರವೇರಿಸಲಾಗಿದೆ. ರಾಜ್ಯಕ್ಕೆ, ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರೂ ಸೇರಿದಂತ ಎಲ್ಲರ ಒಳಿತಿಗಾಗಿ ಹೋಮ ನಡೆಸಲಾಗಿದೆ. ರಾಜ್ಯ ಆದಷ್ಟು ಬೇಗ ಕೊರೋನಾದಿಂದ ಮುಕ್ತವಾಗಲಿ ಎಂದರು.ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿ ಸಧ್ಯದಲ್ಲಿಯೇ ಪದಗ್ರಹಣಕ್ಕೆ ದಿನಾಂಕ ನಿಗದಿ ಮಾಡಲಾಗುವುದು ಎಂದು ಶಿವಕುಮಾರ್ ಹೇಳಿದರು.
ಕೊರೋನಾ ಲಾಕ್ ಡೌನ್ ಮುಂದುವರಿಕೆ ಬಗ್ಗೆ ತಾವು ನಿರ್ಧರಿಸಲು ಬರುವುದಿಲ್ಲ. ಸರ್ಕಾರ ಏನು ತಿರ್ಮಾನ ತೆಗೆದುಕೊಳ್ಳುತ್ತದೆಯೋ ಅದನ್ನು ಪಾಲಿಸುತ್ತೇವೆ. ಮಂತ್ರಿಗಳಲ್ಲಿ ಹಲವರು ವೈದ್ಯರಿದ್ದು, ಅವರೇ ಎಲ್ಲಾ ತಿರ್ಮಾನ ಮಾಡುತ್ತಾರೆ. ನಾವು ಕೇವಲ ಪ್ರಸಾದ ಸ್ವೀಕರಿಸುತ್ತೇವೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಮಾರ್ಮಿಕವಾಗಿ ಉತ್ತರಿಸಿದರು. ಜ್ಯೋತಿಷಿ ಆರಾಧ್ಯ ಮಾತನಾಡಿ, ಕಾಂಗ್ರೆಸ್ ನ ಹೊಸ ಕಟ್ಟಡಕ್ಕಾಗಿ ವಿಶೇಷ ಪೂಜೆ ನಡೆದಿಲ್ಲ. ಮುಂದೆ ಯಾವುದೇ ವಿಘ್ನಗಳು ಎದುರಾಗಬಾರದೆಂದು ಈ ಹೋಮಗಳು ನಡೆಸಿದ್ದೇವೆ. ಯಾವುದೇ ದೋಷ ಇದ್ದರೂ ಪರಿಹಾರ ಆಗುತ್ತವೆ.
ಕಾಂಗ್ರೆಸ್ ಹಳೆಯ ಪಕ್ಷ ಎಲ್ಲರಿಗೂ ಒಳ್ಳೆಯದು ಆಗಬೇಕು. ಒಬ್ಬರಿಗೊಬ್ಬರು ಸಹಕಾರದಿಂದ ಕೆಲಸ ಮಾಡಿಕೊಂಡು ಹೋಗಲು,ಯಾವುದಾದರೂ ಶಾಪಗಳಿದ್ದರೆ ಭೂ ವರಹ ಹೋಮದಿಂದ ಅದು ನಿವಾರಣೆಯಾಗುತ್ತದೆ ಎಂದರು.ಹೋಮದ ನಂತರ ಅರುಣಾಚಲೇಶ್ವರನ ದರ್ಶನ ಪಡೆಯಬೇಕು. ಅರುಣಾಚಲೇಶ್ವರ ಎಂದರೆ ಅಗ್ನಿಶಿವ ಹಾಗಾಗಿ ಶಿವಕುಮಾರ್ ದೇವಸ್ಥಾನಕ್ಕೆ ತೆರಳಬೇಕು ಎಂದರು. ಹೋಮ ಹವನದ ನಡುವೆ ಮಂಗಳಮುಖಿಯರಿಗೆ ಡಿ.ಕೆ ಶಿವಕುಮಾರ್ ಕಾಣಿಕೆ ನೀಡಿದರು. ಶಿವಕುಮಾರ್ ಅವರನ್ನು ಹರಸಲು ಮಂಗಳಮುಖಿಯರು ಬಂದಾಗ ತಮ್ಮ ಕಿಸೆಯಿಂದ ಪ್ರತಿಯೊಬ್ಬರಿಗೂ 500 ರೂ ಕಾಣಿಕೆ ನೀಡಿ,ಅವರಿಂದ ಆಶೀರ್ವಾದ ಪಡೆದರು. ಪೂಜೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ಮಾಜಿ ಸಚಿವರಾದ ಪ್ರಿಯಾಂಕ ಖರ್ಗೆ, ದಿನೇಶ್ ಗುಂಡುರಾವ್, ಟಿಬಿ ಜಯಚಂದ್ರ,ಹೆಚ್ ಎಂ ರೇವಣ್ಣ, ರಾಣಿ ಸತೀಶ್ ಮಾಜಿ ಸಂಸದ ವಿ ಎಸ್ ಉಗ್ರಪ್ಪ ಪಾಲ್ಗೊಂಡಿದ್ದರು.