ಚೆನ್ನೈ, ನ 19 : ಶ್ರೀಲಂಕಾದಲ್ಲಿ ಯುದ್ದಾಪರಾಧಗಳ ಆರೋಪಿ ಹಾಗೂ ಮಾಜಿ ರಕ್ಷಣಾ ಸಚಿವ ಗೋಟಬಯ ರಾಜಪಕ್ಸೆ ಅಧ್ಯಕ್ಷರಾಗಿ ಆಯ್ಕೆಗೊಂಡಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಪ್ರತಿಪಕ್ಷ ದ್ರಾವಿಡ ಮುನ್ನೇತ್ರ ಕಳಗಂ, ಮೈತ್ರಿ ಪಕ್ಷಗಳಾದ ಎಂ ಡಿ ಎಂ ಕೆ ಹಾಗೂ ವಿಡುತಲೈ ಚಿರುಥಗೈ ಕಚ್ಚಿ ಹಾಗೂ ಆಡಳಿತಾರೂಢ ಎಐಎಡಿಎಂಕೆ ಮೈತ್ರಿ ಪಕ್ಷ ಪಟ್ಟಾಳಿ ಮಕ್ಕಳ್ ಕಚ್ಚಿ, ದ್ವೀಪ ರಾಷ್ಟ್ರದಲ್ಲಿರು ಈಳಂ ತಮಿಳರ ರಕ್ಷಣೆ ಭಾರತ ಪ್ರಧಾನಿ ನರೇಂದ್ರ ಮೋದಿ ಧಾವಿಸಬೇಕು ಎಂದು ಆಗ್ರಹಿಸಿದ್ದಾರೆ. 2009 ಮೇ ತಿಂಗಳಲ್ಲಿ ದ್ವೀಪರಾಷ್ಟ್ರದಲ್ಲಿ ನಡೆದ ಜನಾಂಗೀಯ ವಿರುದ್ದ ಅಂತಿಮ ಸಮರದಲ್ಲಿ ತಮಿಳ ಜನಾಂಗವನ್ನು ನರಮೇಧ ನಡೆಸಿದ್ದ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರ ಸಹೋದರರಾಗಿರುವ ಗೋಟಬಯ ರಾಜಪಕ್ಸೆ ತಮಿಳರ ವಿರುದ್ದ ದ್ವೇಷ ಸಾಧಿಸಬಹುದು ಎಂಬ ಭೀತಿ ವ್ಯಕ್ತಪಡಿಸಿದ್ದಾರೆ. ಯುದ್ದದ ನಂತರ ತಮಿಳುನಾಡಿನ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಮಹಿಂದ ರಾಜಪಕ್ಸೆ ಅವರನ್ನು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಯುದ್ಧ ಅಪರಾಧ, ವ್ಯಾಪಕ ಮಾನವ ಹಕ್ಕುಗಳ ಉಲ್ಲಂಘನೆಗಾಗಿ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದವು. ಈ ಬೇಡಿಕೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮತ್ತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ವೇದಿಕೆಯಲ್ಲಿಯೂ ಪ್ರತಿಧ್ವನಿಗೊಂಡಿತ್ತು. ತಮಿಳುನಾಡಿನ ಜನರು ಶ್ರೀಲಂಕಾದ ಉತ್ತರ ಪ್ರಾಂತ್ಯದಲ್ಲಿ ವಾಸಿಸುತ್ತಿರುವ ತಮಿಳರೊಂದಿಗೆ ಸಾಂಪ್ರದಾಯಿಕ ಸಂಬಂಧ ಹಂಚಿಕೊಂಡಿದ್ದು, ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೊ ಹಾಗೂ ಪಿಎಂಕೆ ಸಂಸ್ಥಾಪಕ ಡಾ.ಎಸ್. ರಾಮದಾಸ್ ಸೇರಿ ಹಲವು ನಾಯಕರು ಶ್ರೀಲಂಕಾದಲ್ಲಿ ಜನಮತಸಂಗ್ರಹ ನಡೆಸಿ, ಪ್ರತ್ಯೇಕ ತಮಿಳು ಈಳಂ ಪರವಾಗಿ ಪ್ರತಿಪಾದನೆ ನಡೆಸುತ್ತಿದ್ದಾರೆ. 13 ನೇ ತಿದ್ದುಪಡಿಯಲ್ಲಿ ಒಪ್ಪಿರುವಂತೆ, ದ್ವೀಪ ರಾಷ್ಟ್ರದಲ್ಲಿನ ತಮಿಳರಿಗೆ ಸಮಾನ ಅಧಿಕಾರ ವರ್ಗಾಯಿಸಬೇಕು ಎಂದು ಒತ್ತಾಯಿಸಿದ್ದಾರೆ. ಶ್ರೀಲಂಕಾದಲ್ಲಿ ತಮಿಳರ ನರಮೇಧ, ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಯುದ್ದಾಪರಾಧ ನಡೆಸಿರುವ ಮಹಿಂದ ರಾಜಪಕ್ಸೆ ಅವರನ್ನು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆಗೆ ನಡೆಸಬೇಕು ಎಂದು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಪರಮೋಚ್ಚನಾಯಕಿ, ದಿ. ಮುಖ್ಯಮಂತ್ರಿ ಜೆ ಜಯಲಲಿತಾ ತಮ್ಮ ಜೀವನದ ಕೊನೆಯವರೆಗೂ ಒತ್ತಾಯಿಸುತ್ತಿದ್ದರು.