ತಾಲೂಕಾ ಮಟ್ಟದ ಶಿಕ್ಷಣ ಸುಧಾರಣಾ ಸಮಿತಿ ಸಭೆ

Taluka Level Education Reform Committee Meeting

ತಾಲೂಕಾ ಮಟ್ಟದ ಶಿಕ್ಷಣ ಸುಧಾರಣಾ ಸಮಿತಿ ಸಭೆ 

ಹಾನಗಲ್ 28 :ಸಭೆ,ಸಮಾರಂಭಗಳ ನೆಪದಲ್ಲಿ ಶಿಕ್ಷಕರು ಶಾಲೆಗೆ ಚಕ್ಕರ್ ಹೊಡೆಯುವಂತಿಲ್ಲ. ಶಾಲಾವಧಿಯಲ್ಲಿ ತಮ್ಮ ಹೊಲ, ಗದ್ದೆ, ತೋಟಗಳಿಗೆ ಓಡಾಡುವಂತಿಲ್ಲ. ವ್ಯಾಪಾರ, ವಹಿವಾಟಿನಲ್ಲಿ ತೊಡಗುವಂತಿಲ್ಲ. ಶೈಕ್ಷಣಿಕ ಹಿತಕ್ಕೆ ಧಕ್ಕೆಯಾಗುವಂಥ ವರ್ತನೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ತಾಕೀತು ಮಾಡಿದರು. 

   ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ತಾಲೂಕಾ ಮಟ್ಟದ ಶಿಕ್ಷಣ ಸುಧಾರಣಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವ ಶಿಕ್ಷಕರ ಸಂಖ್ಯೆ ತಾಲೂಕಿನಲ್ಲಿ ಹೆಚ್ಚಿದೆ. ಆದರೆ ಕೆಲ ಶಿಕ್ಷಕರು ವೃತ್ತಿಲೋಪ ತೋರುತ್ತಿರುವುದನ್ನು ಗಮನಿಸಿದ್ದೇನೆ. ಯಾವುದೇ ಕಾರಣಕ್ಕೂ ಮುಂದೆ ಹೀಗಾಗಬಾರದು. ಶೈಕ್ಷಣಿಕ ಯೋಜನೆಗಳು ಸಮರ​‍್ಕವಾಗಿ ಜಾರಿಯಾಗಬೇಕು. ಶಾಲೆಗಳಲ್ಲಿ ಸರಿಯಾದ ಸಮಯಕ್ಕೆ ಪಾಠ ಪ್ರವಚನಗಳು ನಡೆಯಬೇಕು. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಇಲ್ಲ. ಅಧಿಕಾರಿಗಳು ನಿಗಾ ವಹಿಸುವಂತೆ ಸೂಚಿಸಿದರು. 

  ಕರ್ತವ್ಯ ಲೋಪ ತೋರುತ್ತಿರುವ ಶಿಕ್ಷಕರನ್ನು ಗುರುತಿಸಿ, ಈಗಲೇ ಕಟ್ಟುನಿಟ್ಟಿನ ಸೂಚನೆ ನೀಡಿ. ಶಾಲೆಗಳಲ್ಲಿಯೇ ತಂಬಾಕು, ಗುಟ್ಕಾ ಸೇವಿಸುವುದು, ತರಗತಿಯಲ್ಲಿ ಮೊಬೈಲ್ ಬಳಸುವುದು, ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ವರ್ತನೆಗಳು ಶಿಕ್ಷಕರಿಂದ ನಡೆಯಬಾರದು ಎಂದರು. ಕೆಲ ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶೂ, ಸಾಕ್ಸ್‌, ಸಮವಸ್ತ್ರ ಧರಿಸದೇ ಇರುವುದನ್ನು ಗಮನಿಸಿದ್ದೇನೆ. ಸರ್ಕಾರದ ಯೋಜನೆಗಳು ಸದ್ಭಳಕೆಯಾಗಬೇಕು. ದುರುಪಯೋಗ ಆಗುವುದನ್ನು ತಡೆಯಬೇಕಿದೆ.ಶಿಕ್ಷಕರ ಸಮಸ್ಯೆಗಳನ್ನೂ ಸಹ ಸಮಾಧಾನದಿಂದ ಆಲಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಿ. ಆದರೆ ಯಾವುದೇ ಕಾರಣಕ್ಕೂ ವೈಯಕ್ತಿಕ ಕಾರಣಗಳಿಂದ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಾರದು ಎಂದು ಹೇಳಿದ ಶಾಸಕ ಮಾನೆ, ಪ್ರತಿಯೊಬ್ಬರೂ ಸಾಮಾಜಿಕ ಜವಾಬ್ದಾರಿ ಹೊತ್ತುಕೊಳ್ಳಬೇಕಿದೆ. ಶಿಕ್ಷಣ ಸುಧಾರಣಾ ಸಮಿತಿ ಸದಸ್ಯರು ನಿಯಮಿತವಾಗಿ ಶಾಲೆಗಳಿಗೆ ಅನೀರೀಕ್ಷಿತವಾಗಿ ಭೇಟಿ ನೀಡಿ ಆಗು, ಹೋಗುಗಳ ಮೇಲೆ ಗಮನ ಹರಿಸಿ ಎಂದರು. 

          ತಹಶೀಲ್ದಾರ್ ರೇಣುಕಾ ಎಸ್‌. ತಾಪಂ ಇಒ ಪರಶುರಾಮ ಪೂಜಾರ, ಬಿಇಒ ವಿ.ವಿ.ಸಾಲಿಮಠ, ಹಾವೇರಿಯ ಡಯಟ್ ಪ್ರಾಚಾರ್ಯ ಗೀರೀಶ್ ಪದಕಿ, ಸಮಿತಿಯ ಸದಸ್ಯರಾದ ಮೆಹಬೂಬ ಬ್ಯಾಡಗಿ, ಬಸವರಾಜ ಕರೆಣ್ಣನವರ, ಬಸವರಾಜ ಚವ್ಹಾಣ, ಅನಿತಾ ಶಿವೂರ, ಅಬ್ದುಲಗನಿ ಪಟೇಲ, ಹೆಗ್ಗಪ್ಪ ಕಾಮನಹಳ್ಳಿ, ಚಂದ್ರಶೇಖರ ಬಳ್ಳಾರಿ ಇದ್ದರು.