ಟ್ಯಾಲೆಂಟ್ ಸರ್ಚ ಪರೀಕ್ಷೆ: ಸಂತೋಷಕುಮಾರ ಮನಗುತ್ತಿ ಉತ್ತಮ ಸಾಧನೆ

Talent search test: Santhoshkumar Managutti did well

ಬೈಲಹೊಂಗಲ 17: ಜಿಲ್ಲಾ ಪಂಚಾಯತಿ ಬೆಳಗಾವಿ ಇವರ ವತಿಯಿಂದ ನಡೆದ ಜಿಲ್ಲಾ ಮಟ್ಟದ ಟ್ಯಾಲೆಂಟ್ ಸರ್ಚ್‌ ಪರೀಕ್ಷೆಯಲ್ಲಿ ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿ ಸಂತೋಷಕುಮಾರ ರವೀಂದ್ರ ಮನಗುತ್ತಿ ಉತ್ತಮ ಸಾಧನೆ ಮಾಡಿ ಟಾಪ್ 25 ರ ಆಯ್ಕೆಪಟ್ಟಿಯಲ್ಲಿ 20ನೇ ಸ್ಥಾನ ಪಡೆದಿದ್ದಾನೆ.  

ಈ ಅಭೂತಪೂರ್ವ ಯಶಸ್ಸಿಗೆ ಶಾಲೆಯ ಸರ್ವಸಿಬ್ಬಂದಿ, ಎಸ್‌.ಡಿ.ಎಂ.ಸಿ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು, ಗ್ರಾಮದ ಹಿರಿಯರು ಅಭಿನಂದನೆ ಸಲ್ಲಿಸಿದ್ದಾರೆ. ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಬೆಳಗಾವಿ ಜಿಲ್ಲಾ ಪಂಚಾಯತಿ ವತಿಯಿಂದ ಜಿಲ್ಲೆಯ ಎಲ್ಲ ಸರಕಾರಿ ಪ್ರೌಢಶಾಲೆ ಹಾಗೂ ಸರಕಾರಿ ವಸತಿ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬಹುಆಯ್ಕೆ ಮಾದರಿಯ ಪರೀಕ್ಷೆ ನಡೆಸಲಾಗಿತ್ತು. ಪ್ರಚಲಿತ ಘಟನೆಗಳು, ಆಪ್ಟಿಟ್ಯೂಡ್ ಟೆಸ್ಟ್‌ ಹಾಗೂ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳ 100 ಅಂಕಗಳ ಪರೀಕ್ಷೆಯಲ್ಲಿ ಋಣಾತ್ಮಕ ಅಂಕಗಳಿದ್ದು ಓಎಂಆರ್ ಆಧಾರಿತ ಪರೀಕ್ಷೆ ಇದಾಗಿತ್ತು. ಶಿಸ್ತುಬದ್ಧವಾಗಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಡೆದ ಪರೀಕ್ಷೆಯಲ್ಲಿ ಉತ್ತಮ ಯಶಸ್ಸು ಗಳಿಸಲು ಪೂರಕವಾಗುವಂತೆ ವಿದ್ಯಾರ್ಥಿಗೆ ಶಾಲೆಯ ಎಲ್ಲ ಶಿಕ್ಷಕರು ಮಾರ್ಗದರ್ಶನ ಮಾಡಿದ್ದರು.ಶಾಲೆಯ ವತಿಯಿಂದ ವಿದ್ಯಾರ್ಥಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯಶಿಕ್ಷಕರಾದ ಎನ್‌.ಆರ್‌.ಠಕ್ಕಾಯಿ ಮಾತನಾಡಿ ಭವಿಷ್ಯದಲ್ಲಿ ಉತ್ತಮ ಜ್ಞಾನ ಪಡೆದು ಐ.ಎ.ಎಸ್ ಪರೀಕ್ಷೆ ಎದುರಿಸಿ ಉನ್ನತ ಹುದ್ದೆಯನ್ನು ಅಲಂಕರಿಸುವ ಸೌಭಾಗ್ಯ ವಿದ್ಯಾರ್ಥಿಯದ್ದಾಗಲಿ ಎಂದು ಶುಭ ಹಾರೈಸಿದರು. ಆತನ ಸಾಧನೆಯಿಂದ ಶಾಲೆಯ ಹಾಗೂ ಗ್ರಾಮದ ಕೀರ್ತಿ ಹೆಚ್ಚಾಗಿದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.  

ಶಿಕ್ಷಕರಾದ ಜೆ.ಆರ್‌.ನರಿ, ಪಿ.ಎಸ್‌.ಗುರುನಗೌಡರ, ಎಚ್‌.ವಿ.ಪುರಾಣಿಕ, ಎಸ್‌.ವಿ.ಬಳಿಗಾರ, ಎಂ.ಎನ್‌.ಕಾಳಿ, ಕೆ.ಐ.ಯರಗಂಬಳಿಮಠ, ಎಸ್‌.ಬಿ.ಸಾಳುಂಕೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.