ಕೋಳಿ ಶೀತ ಜ್ವರ ಹರಡದಂತೆ ಸೂಕ್ತ ಮುಂಜಾಗೃತೆ ವಹಿಸಿ: ಜಿಲ್ಲಾಧಿಕಾರಿ ನಲಿನ್ ಅತುಲ್

Take proper precautions to prevent spread of chicken pox: District Collector Nalin Atul

ಲೋಕದರ್ಶನ ವರದಿ 

ಕೋಳಿ ಶೀತ ಜ್ವರ ಹರಡದಂತೆ ಸೂಕ್ತ ಮುಂಜಾಗೃತೆ ವಹಿಸಿ: ಜಿಲ್ಲಾಧಿಕಾರಿ ನಲಿನ್ ಅತುಲ್ 

ಕೊಪ್ಪಳ 01: ತೆಲಂಗಾಣ ಮತ್ತು ಆಂದ್ರ​‍್ರದೇಶ ಹಾಗೂ ನಮ್ಮ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋಳಿ ಶೀತ ಜ್ವರದ ರೋಗೋದ್ರೇಕವು ದೃಢಪಟ್ಟಿದ್ದು, ಈ ರೋಗವು ಹರಡದಂತೆ ಕೊಪ್ಪಳ ಜಿಲ್ಲೆಯಲ್ಲಿ ಸೂಕ್ತ ಮುಂಜಾಗೃತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು. 

ಅವರು ಶನಿವಾರ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿಯ ಕೆಸ್ವಾನ್‌-2ರ ಸಭಾಂಗಣದಲ್ಲಿ ಜಿಲ್ಲಾ ಪ್ರಾಣಿಜನ್ಯ ರೋಗಗಳ ತುರ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. 

ಕಳೆದ ವಾರ ಪಕ್ಕದ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳಲ್ಲಿ ಹಾಗೂ ಕರ್ನಾಟಕ ರಾಜ್ಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕುಕ್ಕುಟಗಳಲ್ಲಿ ಕೋಳಿ ಶೀತ ಜ್ವರ(ಊ5ಓ1)ದ ರೋಗೋದ್ರೇಕ ಕಂಡುಬಂದಿದ್ದು, ಸೋಂಕು ದೃಢಪಟ್ಟಿದೆ. ಆದ್ದರಿಂದ ಕೊಪ್ಪಳ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ವಾಣಿಜ್ಯ ಕುಕ್ಕಟ ಕ್ಷೇತ್ರಗಳಿರುವುದರಿಂದ ಮುಂಜಾಗೃತೆ ಕ್ರಮಗಳ ಜತೆಗೆ ರೋಗ ಹರಡುವಿಕೆ, ರೋಗ ಲಕ್ಷಣಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿ ಎಂದು ಅಧಿಕಾರಿಗಳಿಗೆ ಮತ್ತು ಕೊಪ್ಪಳ ಜಿಲ್ಲೆಯ ಕೋಳಿ ಫಾರಂಗಳ ಮಾಲೀಕರಿಗೆ ಸೂಚಿಸಿದರು. 

ಹೆಚ್ಚಿನ ಸಂಖ್ಯೆಯಲ್ಲಿ ಕೋಳಿಗಳು ಅಸಹಜ ಸಾವನ್ನಪ್ಪಿದರೆ, ತಕ್ಷಣವೇ ಹತ್ತಿರದ ಪಶುವೈದ್ಯರು ಅಥವಾ ಪಶು ಇಲಾಖೆ ಸಿಬ್ಬಂದಿಯವರ ಗಮನಕ್ಕೆ ತರಬೇಕು. ರೋಗ ನಿಯಂತ್ರಣ ಹಾಗೂ ಆರೋಗ್ಯ ರಕ್ಷಣೆಯ ಹಿತದೃಷ್ಠಿಯಿಂದ ಕೋಳಿ ಫಾರಂಗಳಿಗೆ ಅನುಮತಿಯಿಲ್ಲದೇ ಯಾರು ಪ್ರವೇಶಿಸದಂತೆ ನೋಡಿಕೊಳ್ಳಬೇಕು. ಕೆರೆ, ಕಟ್ಟೆ, ನೀರಿನ ತೋರೆ, ನದಿ ಮತ್ತು ಇತರೇ ನೀರಿನ ಜಾಗಕ್ಕೆ ವಲಸೆ ಬರುವ ಅಥವಾ ಅಲ್ಲಿಯೇ ವಾಸಿಸುವ ಹಕ್ಕಿ ಪಕ್ಷಿಗಳು ಅಸಹಜವಾಗಿ ಸತ್ತರೆ ತಕ್ಷಣವೇ ಪಶುವೈದ್ಯಕೀಯ ಇಲಾಖೆಯ ಗಮನಕ್ಕೆ ತರಬೇಕು ಎಂದರು.   

ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಅವರು ಮಾತನಾಡಿ, ಜಿಲ್ಲೆಯಿಂದ ಹೊರಗೆ ಹಾಗೂ ಹೊರಗಿನಿಂದ ಜಿಲ್ಲೆಗೆ ಪ್ರವೇಶಿಸುವ ಸೋಂಕಿತ ಕೋಳಿ, ಕೋಳಿ ಉತ್ಪನ್ನಗಳು, ಕೋಳಿ ಆಹಾರ, ಸಂಬಂಧಿತ ಪರಿಕರಗಳು ಹಾಗೂ ಸಾಗಾಣಿಕೆ ವಾಹನಗಳನ್ನು ಸೋಂಕು ನಿವಾರಿಕಗಳಿಂದ ಸಿಂಪಡಿಸಿದ ನಂತರವೇ ಚಲನ-ವಲನಕ್ಕೆ ಕ್ರಮವಹಿಸಬೇಕು. ಕೋಳಿ ಫಾರಂಗಳ ಪ್ರದೇಶವನ್ನು ಶುಚಿಯಾಗಿಟ್ಟು ಕೊಳ್ಳುವುದು ಹಾಗೂ ನಿಯಮಿತವಾಗಿ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಬೇಕು. ವಲಸೆ ಬರುವ ಅಥವಾ ಅಲ್ಲಿಯೇ ವಾಸಿಸುವ ಹಕ್ಕಿ ಪಕ್ಷಿಗಳು ಮನುಷ್ಯರ ಆಹಾರ, ಕುಡಿಯುವ ನೀರಿನ ಸಂಪರ್ಕಕ್ಕೆ ಬರದಂತೆ ಕ್ರಮವಹಿಸಬೇಕು ಎಂದರು. 

ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ ಪಿ.ಎಂ.ಮಲ್ಲಯ್ಯ ಅವರು ಮಾತನಾಡಿ, “ಕೋಳಿ ಶೀತ ಜ್ವರ/ಹಕ್ಕಿಜ್ವರ”ವು ಸಾಂಕ್ರಾಮಿಕ ರೋಗವಾಗಿದ್ದು, “ಎವಿಯನ್ ಇನ್‌-ಫ್ಲೂ-ಎಂಜಾ ಎಂಬ ವೈರಾಣುವಿನಿಂದ ಬರುವ ರೋಗವಾಗಿದೆ. ಕೋಳಿ ಶೀತ ಜ್ವರವು ಕೋಳಿಯ ವಿವಿಧ ಪ್ರಬೇದಗಳಲ್ಲಿ ಕಂಡುಬರುತ್ತದೆ. ನಾಟಿ ಕೋಳಿ, ಕೋಳಿ, ಟರ್ಕಿ ಕೋಳಿ, ಕೌಜುಗನ ಹಕ್ಕಿ, ನವಿಲಹಕ್ಕಿ, ಬಾತು ಕೋಳಿ,ನವಿಲು ಹಕ್ಕಿ, ಹಂಸ ಪಕ್ಷಿ, ಬಾತುಕೋಳಿ ಮತ್ತು ಹಕ್ಕಿ ಪ್ರಬೇದಗಳಲ್ಲಿ ಕಂಡು ಬರುತ್ತದೆ.ಇದಲ್ಲದೆ ಮನುಷ್ಯನೊಳ ಗೊಂಡಂತೆ ಎಲ್ಲಾ ಬಿಸಿ ರಕ್ತ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಆದರೆ ಮನುಷ್ಯರಿಂದ ಮನುಷ್ಯರಿಗೆ ಈ ರೋಗ ಹರಡುವುದಿಲ್ಲ. ಕೋಳಿ ಮತ್ತು ಕೋಳಿ ಉತ್ಪನ್ನಗಳನ್ನು ಮುಟ್ಟಿದ್ದಲ್ಲಿ ಸೋಪಿನಿಂದ ಕೈತೊಳಿಯಬೇಕು. 70 ಡಿಗ್ರಿ ಸೇಂಟಿಗ್ರೇಡ್‌ನಲ್ಲಿ ಹತ್ತು ನಿಮಿಷ ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಬೇಯಿಸಿ ಸೇವಿಸುವುದು. ಸಾರ್ವಜನಿಕರು “ಕೋಳಿ ಶೀತ ಜ್ವರ/ ಹಕ್ಕಿಜ್ವರ”ದ ಬಗ್ಗೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು. ಕೋಳಿ ಅಥವಾ ಪಕ್ಷಿಗಳಲ್ಲಿ ಹಠಾತ್ ಸಾವು, ಅಸಾದರಣ ಸಾವು, ಮೂಗೂ, ಬಾಯಿ ಮತ್ತು ಕಣ್ಣಿನಿಂದ ನೀರು ಸುರಿಯುವುದು, ಕೋಳಿಗಳ ಮೋಣಕಾಲು ಮತ್ತು ಪಾದಗಳು ನೀಲಿ ಬಣ್ಣಕ್ಕೆ ತಿರುಗುವುದು. ಈ ರೋಗದ ಲಕ್ಷಣಗಳಾಗಿವೆ. ಸರಿಯಾಗಿ ಬೇಯಿಸದ ಕೋಳಿ ಮಾಂಸ ಮತ್ತು ಮೊಟ್ಟೆಗಳ ಸೇವನೆಯಿಂದ, ಸೂಕ್ತ ಆರೋಗ್ಯ ರಕ್ಷಕ ಕವಚಗಳನ್ನು ಧರಿಸದೇ ರೋಗ ಪಿಡಿತ ಕೋಳಿ ಮತ್ತು ಕುಲುಷಿತ ಸಲಕರಣೆಗಳ ಸಂಪರ್ಕದಿಂದ ರೋಗ ಹರಡುವ ಸಾಧ್ಯತೆ ಇರುತ್ತದೆ ಎಂದರು.  

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಟಿ.ಎಸ್‌. ರುದ್ರೇಶಪ್ಪ, ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜು ಸೇರಿದಂತೆ ಪಶುವೈದ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರುಗಳು ಮತ್ತು ಕೊಪ್ಪಳ ಜಿಲ್ಲೆಯ ಕೋಳಿ ಫಾರಂಗಳ ಮಾಲೀಕರು ಉಪಸ್ಥಿತರಿದ್ದರು.