ತಾಳಿಕೋಟಿ, 25; ಕಣ್ಣುಗಳು ದೇಹದ ಅಮೂಲ್ಯ ಅಂಗಗಳಾಗಿವೆ, ಅವುಗಳನ್ನು ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ ಅದರ ರಕ್ಷಣೆ ಕುರಿತು ಹೆಚ್ಚು ಜಾಗೃತರಾಗಿ ಸಮಯ ಸಮಯಕ್ಕೆ ಅವುಗಳ ತಪಾಸಣೆ ಮಾಡಿಕೊಳ್ಳಿ ಎಂದು ಪಡೇಕನೂರ ಗ್ರಾಮದ ದಾಸೋಹ ವಿರಕ್ತ ಮಠದ ಪೀಠಾಧಿಪತಿ ಪ.ಪೂ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು. ದಾಸೋಹ ವಿರಕ್ತ ಮಠದ ಜಾತ್ರೋತ್ಸವ ಅಂಗವಾಗಿ ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂದತ್ವ ನಿವಾರಣಾ ಸಂಸ್ಥೆ ವಿಜಯಪುರ ಇವರ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡ ನೇತ್ರ ಉಚಿತ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಸಾವಿರಾರು ಜನರ ಬಾಳಿಗೆ ಬೆಳಕು ನೀಡುವ ಕಾರ್ಯವನ್ನು ಮಾಡುತ್ತಿರುವ ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥರಾದ ಡಾ.ಪ್ರಭುಗೌಡ ಲಿಂಗದಳ್ಳಿ ಹಾಗೂ ಅವರ ತಂಡದ ಈ ಸೇವೆ ಶ್ಲಾಘನೀಯವಾದದ್ದು ಎಂದರು.
ಈ ನೇತ್ರ ಉಚಿತ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಸುಮಾರು 125 ಜನರು ತಪಾಸಣೆ ಮಾಡಿಸಿಕೊಂಡರು. ಅದರಲ್ಲಿ 30 ಜನರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಶಿಬಿರದಲ್ಲಿ ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಬೀಬಿ ಆಸ್ಮಾ, ಮಹಾಂತೇಶ, ಸಿಬ್ಬಂದಿಗಳಾದ ನಾಯಕ್ ಪವಾರ, ಸೌಮ್ಯ ಕೊಟ್ರಶೆಟ್ಟಿ, ಪ್ರತಿಕ್ಷಾ, ಅಲ್ಲಮ ಪ್ರಭು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.