ಸುತ್ತಿಗೆಯಿಂದ ಹಣೆ, ತಲೆಗೆ ಹೊಡೆದು ತನ್ನ ಕುಟುಂಬದ ಐವರನ್ನು ಕ್ರೂರವಾಗಿ ಸಾಯಿಸಿದ 23 ವರ್ಷದ ಯುವಕ

A 23-year-old youth brutally killed five members of his family by hitting their forehead and head wi

ತಿರುವನಂತಪುರ 26:  23 ವರ್ಷದ ಯುವಕನೊಬ್ಬ ತನ್ನ ಕುಟುಂಬದ ಐವರನ್ನು ಸುತ್ತಿಗೆಯಿಂದ ಹಣೆ, ತಲೆಗೆ ಹೊಡೆದು ಕ್ರೂರವಾಗಿ ಸಾಯಿಸಿದ ಘಟನೆ ಫೆಬ್ರುವರಿ 24 ರಂದು ನಡೆದಿದೆ.

ಅಷ್ಟೇ ಅಲ್ಲದೇ ತಾಯಿಯನ್ನೂ ಸಾಯಿಸುವ ಉದ್ದೇಶದಿಂದ ತೀವ್ರ ಹಲ್ಲೆ ಮಾಡಿದ್ದಾನೆ. ಆದರೆ ಸದ್ಯ ಆತನ ತಾಯಿ ತಿರುವನಂತಪುರದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಾವು–ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಐವರನ್ನು ಸಾಯಿಸಿರುವ ಹಂತಕ ‘ಆಫಾನ್’ ಪೊಲೀಸರಿಗೆ ಶರಣಾಗಿದ್ದಾನೆ.

ನೆರೆಹೊರೆಯವರಿಗೆ ಸಭ್ಯಸ್ಥನಂತೆ ಕಾಣುತ್ತಿದ್ದ ಆಫಾನ್, ಫೆಬ್ರುವರಿ 24 ರಂದು ಸೋಮವಾರ ಬೆಳಿಗ್ಗೆ 10.30 ರಿಂದ 12.30ರ ಸುಮಾರು ವೆಂಜರಮೂಡುವಿನ ಪಾಂಗೊಡೆ ಮನೆಯಲ್ಲಿ ಹಾಲ್‌ನಲ್ಲಿ ಕುಳಿತಿದ್ದ ತನ್ನ ‘ಸಲ್ಮಾ ಬೀಬಿ’ (74) ಎನ್ನುವ ಅಜ್ಜಿಯನ್ನು ಸುತ್ತಿಗೆಯಿಂದ ಹೊಡೆದು ಸಾಯಿಸಿದ್ದಾನೆ.

ನಂತರ ಮಧ್ಯಾಹ್ನ 1.30 ರಿಂದ 4 ಗಂಟೆ ಸುಮಾರು ಪಾಂಗೊಡೆಯಿಂದ 17 ಕಿ.ಮೀ ದೂರದಲ್ಲಿರುವ ಎಸ್‌.ಎನ್‌ ಪುರ ಎಂಬಲ್ಲಿಗೆ ತೆರಳಿ ತನ್ನ ಚಿಕ್ಕಪ್ಪ ‘ಲತೀಫ್’ (60) ಮತ್ತು ಚಿಕ್ಕಮ್ಮ ‘ಶಾಹೀದಾ’ (56) ಎನ್ನುವರನ್ನು ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಶಾಲೆಗೆ ಹೋಗಿದ್ದ ತನ್ನ 14 ವರ್ಷದ ತಮ್ಮ ‘ಆಫ್ಸಾನ್‌’ನ್ನು ಶಾಲೆಯಲ್ಲಿ ಭೇಟಿಯಾಗಿದ್ದಾನೆ. ಆತನನ್ನು ಬೈಕ್‌ನಲ್ಲಿ ಕರೆದುಕೊಂಡು ಎಸ್‌.ಎನ್‌ ಪುರದಿಂದ 5 ಕಿ.ಮೀ ದೂರ ಇರುವ ಪೆರುಮಾಳ್ ಎಂಬಲ್ಲಿ ತನ್ನ ತಾಯಿ ರೇಷ್ಮಾ (50) ಹಾಗೂ ಗೆಳತಿ ಫರ್ಸಾನಾ (22) ಇದ್ದ ಮನೆಗೆ ಹೋಗಿದ್ದಾನೆ. ಆಗ ಸಂಜೆ 4 ಗಂಟೆ ಸಮಯ. ಮೂವರನ್ನು ಪ್ರತ್ಯೇಕವಾಗಿ ಮಾತನಾಡಿಸುವ ನೆಪದಲ್ಲಿ ಸುತ್ತಿಗೆಯಿಂದ ಹಣೆಗೆ, ತಲೆಗೆ ಹಲವಾರು ಸಾರಿ ಜೋರಾಗಿ ಹೊಡೆದಿದ್ದಾನೆ. ಒಂದೇ ಏಟಿಗೆ ತಮ್ಮ ಆಫ್ಸಾನ್‌ ಮತ್ತು ಗೆಳತಿ ಫರ್ಸಾನಾ ಮೃತಪಟ್ಟಿದ್ದಾರೆ. ಆ ವೇಳೆ ಹಂತಕ ಅಲ್ಲಿಂದ ಕಾಲ್ಕಿತ್ತಿದ್ದ. ಆದರೆ, ಆತನ ತಾಯಿಯ ಪ್ರಾಣ ಹೋಗಿರಲಿಲ್ಲ.

ಕಡೆಗೆ ಆಫಾನ್ ಅದೇ ದಿನ ರಾತ್ರಿ 8 ಗಂಟೆ ಸುಮಾರು ವೆಂಜರಮೂಡು ಪೊಲೀಸ್ ಠಾಣೆಗೆ ಹಾಜರಾಗಿದ್ದಾನೆ. ಕೂಡಲೇ ಪೊಲೀಸರು ಕ್ರೈಮ್ ಸೀನ್ ಪರಿಶೀಲನೆ ನಡೆಸಿದಾಗ ಆಫಾನ್‌ನ ಕೃತ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ. ಇದಕ್ಕೂ ಮುನ್ನ ಆತ ಬೇರೆ ಬೇರೆ ವಿಧಾನಗಳನ್ನು ಬಳಸಿ ಆತ್ಮಹತ್ಯೆಗೆ ಯತ್ನಿಸಿದ್ದ.

‘ಆಫಾನ್ ಕೊಲೆಗಳನ್ನು ಮಾಡುವ ಮುನ್ನ ಡ್ರಗ್ಸ್‌ ತೆಗೆದುಕೊಂಡಿದ್ದು ದೃಢಪಟ್ಟಿದೆ. ಆದರೆ, ಯಾವ ಡ್ರಗ್ಸ್‌ ತೆಗೆದುಕೊಂಡಿದ್ದ ಎಂಬುದು ಇನ್ನೂ ಖಚಿತವಾಗಿಲ್ಲ. ತನಿಖೆ ನಡೆಯುತ್ತಿದೆ. ಠಾಣೆಗೆ ಶರಣಾದ ದಿನ ಆತನ ಮುಖದಲ್ಲಿ ಯಾವುದೇ ಪಶ್ಚಾತ್ತಾಪದ ಮನೋಭಾವ ಕಂಡಿರಲಿಲ್ಲ. ತನ್ನವರನ್ನೇ ಅತ್ಯಂತ ಭೀಕರವಾಗಿ ಕೊಲೆ ಮಾಡಿದ್ದಾನೆ. ಕೊಲೆಗಳ ಉದ್ದೇಶ ಏನು, ಆತನ ಹಿನ್ನೆಲೆ ಏನು? ಎಂಬುದನ್ನು ತಿಳಿಯಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.