ವಿಧಾನಸಭೆಯಲ್ಲಿ ಸಂವಿಧಾನ ಕುರಿತ ವಿಶೇಷ ಅಧಿವೇಶನದ ಸಂದರ್ಭದಲ್ಲಿ ಸಚಿವ ಡಾ.ಕೆ. ಸುಧಾಕರ್ ಅವರು ತಮಗೆ "ಸ್ಪೀಕರ್ ಪೀಠದಿಂದ ಅನ್ಯಾಯವಾಗಿದೆ. ಸ್ಪೀಕರ್ ಅವರು ಷಡ್ಯಂತ್ರ ಮಾಡಿದ್ದಾರೆ" ಎಂಬ ಪದ ಉಪಯೋಗಿಸಿರುವುದರಿಂದ ಅವರ ಹೇಳಿಕೆಯಿಂದ ಸ್ಪೀಕರ್ ಪೀಠ, ಸದನದ ಹಕ್ಕುಚ್ಯುತಿಯಾಗಿದೆ. ಆದ್ದರಿಂದ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.ಪ್ರಶ್ನೋತ್ತರ ಕಲಾಪದ ಬಳಿಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹಕ್ಕುಚ್ಯುತಿ ವಿಯಷದ ಬಗ್ಗೆ ಮಾತನಾಡಲು ಅವಕಾಶ ನೀಡಿದರು.ಮಾತು ಮುಂದುವರಿಸಿದ ಸಿದ್ದರಾಮಯ್ಯ, 17 ಮಂದಿ ಶಾಸಕರ ವಿರುದ್ಧ ಅಂದಿನ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಸಂವಿಧಾನದ 10 ಶೆಡ್ಯೂಲ್ಡ್ ನಡಿ ಕ್ರಮಕೈಗೊಂಡಿದ್ದಾರೆ. ಅದು ಅವರ ಜವಾಬ್ದಾರಿಯೂ ಆಗಿತ್ತು. ಅವರು ಒಬ್ಬ ವ್ಯಕ್ತಿಯಾಗಿ ತೀರ್ಪು ನೀಡಿರಲಿಲ್ಲ. ಅವರು ಸ್ಪೀಕರ್ ಸ್ಥಾನದಿಂದ ವಾದ-ವಿವಾದ ಆಲಿಸಿದ ಬಳಿಕ ತೀರ್ಪು ನೀಡಿದ್ದರು. ಆದರೆ ಇದನ್ನು ಷಡ್ಯಂತ್ರ ಎಂದು ಹೇಳುವುದು ಹಕ್ಕುಚ್ಯುತಿಯ ವ್ಯಾಪ್ತಿಗೆ ಬರುತ್ತದೆ. ಸ್ಪೀಕರ್ ಸ್ಥಾನ ಸಾಂವಿಧಾನಿಕ ಸ್ಥಾನಮಾನವಾಗಿದೆ ಎಂದರು.ಸ್ಪೀಕರ್ ತೀರ್ಪನ್ನು ಷಡ್ಯಂತ್ರ ಎಂದು ಹೇಳಿರುವುದು ಗಂಭೀರ ವಿಷಯವಾಗಿರುವುದರಿಂದ ಅವರ ವಿರುದ್ಧ ಗಂಭೀರ ಕ್ರಮಕೈಗೊಳ್ಳಬೇಕು. ಹಕ್ಕುಚ್ಯುತಿಯ ಕುರಿತ ತಮ್ಮ ವಾದವನ್ನು ನಿಮಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಸುಧಾಕರ್ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು. ಕಾನೂನಿನಡಿ ಅವರಿಗೆ ಛೀಮಾರಿ ಹಾಕಬಹುದು, ಅಮಾನತುಗೊಳಿಸಬಹುದು, ವಜಾಗೊಳಿಸಬಹುದು ಅಥವಾ ಹಕ್ಕುಚ್ಯುತಿ ಸಮಿತಿಗೆ ಈ ವಿಷಯವನ್ನು ಕಳುಹಿಸಬಹುದು ಎಂದು ಸಿದ್ದರಾಮಯ್ಯ ವಿವರಿಸಿದರು.ಇದಕ್ಕೂ ಮೊದಲು ಜಗದೀಶ್ ಶೆಟ್ಟರ್, ಮೊನ್ನೆ ಸದನದಲ್ಲಿ ನಡೆದ ವಿಷಯವನ್ನು ನಿಯಮ 363ರಡಿ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು.ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಅದಕ್ಕೆ ತಮ್ಮದೇನೂ ಅಕ್ಷೇಪವಿಲ್ಲ. ನಾನು ಕೂಡ 363 ನಿಯಮ ಅನ್ವಯ ಮಾಡುವಂತೆ ಕೇಳುತ್ತಿದ್ದೇನೆ ಎಂದರು.ಆಗ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಎದ್ದು ನಿಂತು ಮಾತನಾಡಲು ಮುಂದಾದಾಗ ಸ್ಪೀಕರ್, ಎಲ್ಲರಿಗೂ ಮಾತನಾಡಲು ಅವಕಾಶ ನೀಡುತ್ತೇನೆ. ಎಲ್ಲರೂ ತಮ್ಮ ಆಸನದಲ್ಲಿ ಕುಳಿತುಕೊಳ್ಳಿ ಎಂದು ಸೂಚಿಸಿದರು. ಆಗ ಬಿಜೆಪಿ ಸದಸ್ಯರು, ಸುಧಾಕರ್ ಭಾಷಣ ಇನ್ನೂ ಮುಗಿಸಿಲ್ಲ. ಮೊದಲು ಅವರಿಗೆ ಅವಕಾಶ ನೀಡಿ ಎಂದು ಹೇಳಿದರು.ಆಗ ಕಾಂಗ್ರೆಸ್ನ ಕೃಷ್ಣಬೈರೇಗೌಡ ಸೇರಿದಂತೆ ಇತರ ಸದಸ್ಯರು, ಇದು ಕಲಾಪ ನುಂಗುವ ಪ್ರಯತ್ನ. ಬಿಜೆಪಿಯವರಿಗೆ ಕಲಾಪ ನಡೆಸುವ ಆಸಕ್ತಿ ಇಲ್ಲ ಎಂದು ಟೀಕಿಸಿದರು. ಸಭಾ ನಾಯಕರೂ ಆಗ ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯಪ್ರವೇಶಿಸಿ, ಹಕ್ಕುಚ್ಯುತಿ ವಿಷಯಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಅವರಿಗೆ ಮಾತನಾಡಲು ಸ್ಪೀಕರ್ ಅವಕಾಶ ನೀಡಿದ್ದಾರೆ. ಆದ್ದರಿಂದ ಮೊದಲು ಅವರು ಮಾತನಾಡಲಿ, ಬಳಿಕ ಇತರರಿಗೆ ಅವಕಾಶ ಸಿಗಲಿದೆ. ಇಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದು ರಾಜ್ಯದ ಆರೂವರೆ ಕೋಟಿ ಜನರಿಗೆ ತಿಳಿಯಲಿ ಎಂದು ಹೇಳಿ ಆಡಳಿತ ಪಕ್ಷದವರನ್ನು ಸುಮ್ಮನಿರುವಂತೆ ಸೂಚಿಸಿದರು.ಆಗ ಸಿದ್ದರಾಮಯ್ಯ ಮಾತು ಮುಂದುವರಿಸಿ, ಸಚಿವ ಸುಧಾಕರ್ ಅವರು ಸಂವಿಧಾನದ ಮೇಲೆ ಮಾ.10ರಂದು ಚರ್ಚೆಯಲ್ಲಿ ಪಾಲ್ಗೊಂಡು ಮಾಡುತ್ತಿದ್ದಾಗ ಅನೇಕ ವಿಷಯ ಪ್ರಸ್ತಾಪ ಮಾಡಿದ್ದಾರೆ. ಆಗ ಮಾತನಾಡುವಾಗ ಸುರೇಶ್ ಕುಮಾರ್ ಅವರು, ಪಾಯಿಂಟ್ ಆಫ್ ಆರ್ಡರ್ ಎತ್ತಿದ್ದಾರೆ. ಸದನದ ನಿಯಮದಲ್ಲಿ, ಯಾರೇ ಮಾತನಾಡುವಾಗ ಯಾರೇ ಸದಸ್ಯರು ಪಾಯಿಂಟ್ ಆಫ್ ಆರ್ಡರ್ ಮೂಲಕ ಪ್ರಸ್ತಾಪಿಸಬಹುದು. ವಿಷಯಾಂತರ ಆಗಿದ್ದರೆ ಸ್ಪೀಕರ್ ಅವರು ಅದರ ಮೇಲೆ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದರು.ಅಂದಿನ ಚರ್ಚೆಯಲ್ಲಿ ಸಂವಿಧಾನ ಆಶಯ, ಅದರ ರಚನೆ, ಹೋರಾಟಗಾರರ ಕನಸು ಏನಿತ್ತು, ಅವು ಎಷ್ಟರ ಮಟ್ಟಿಗೆ ನನಸಾಗಿವೆ. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಏನೆಲ್ಲಾ ಆಶಯ ಇಟ್ಟುಕೊಂಡಿದ್ದರು ಮುಂತಾದ ವಿಷಯಗಳ ಬಗ್ಗೆ ಚರ್ಚೆ ಆಗಿವೆ. ಆಗ ಸುಧಾಕರ್-ರಮೇಶ್ ಕುಮಾರ್ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಯಾವುದೇ ಪ್ರಚೋದನೆ ಇಲ್ಲದೆ ಸುಧಾಕರ್ ಅವರು, ರಮೇಶ್ ಕುಮಾರ್ ವಿರುದ್ಧ, ಈ ಪೀಠದಿಂದ ನನಗೆ ಅನ್ಯಾಯವಾಯಿತು. ನನ್ನಂತೆ 17 ಜನರಿಗೆ ಅನ್ಯಾಯವಾಗಿದೆ ಎಂದು ಹೇಳಿ ಅಂದು ಸುಧಾಕರ್ ಅವರು ಮಾಡಿದ ಭಾಷಣದ ಕೆಲವೊಂದು ಅಂಶಗಳನ್ನು ಸಿದ್ದರಾಮಯ್ಯ ಓದಿದರು.ಸ್ಪೀಕರ್ ಪೀಠಕ್ಕೆ ನ್ಯಾಯಾಲಯದ ಅಧಿಕಾರವಿದೆ. ಈ ಪೀಠದಿಂದ ಮಾಡಿದ ಆದೇಶ ಕೂಡ ನ್ಯಾಯಾಲಯದ ಆದೇಶದಷ್ಟೇ ಪರಿಣಾಮಕಾರಿ. ಆದರೂ ಇಲ್ಲಿನ ತೀರ್ಪನ್ನು ಹೈಕೋರ್ಟ್, ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಬಹುದು ಎಂದು ಸಿದ್ದರಾಮಯ್ಯ ಹೇಳಿದರು.10 ಶೆಡ್ಯೂಲ್ನಲ್ಲಿಯೂ ಯಾವುದೇ ಪ್ರಚೋದನೆಗೆ ಒಳಗಾಗದೆ, ಸ್ವಯಂ ಪ್ರೇರಣೆಯಿಂದ ರಾಜೀನಾಮೆ ಕೊಡಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಅದರಂತೆ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಎಲ್ಲವನ್ನೂ ಪರಿಶೀಲಿಸಿ, ವಾದ-ವಿವಾದ ಆಲಿಸಿ ತೀರ್ಪು ನೀಡಿದ್ದಾರೆ. ಆದರೆ ಈ ತೀರ್ಪನ್ನು ಸದನದಲ್ಲಿ ಪ್ರಸ್ತಾಪಿಸಿದ ಸುಧಾಕರ್, ನಾನು ಸೇರಿದಂತೆ 17 ಜನರ ರಾಜಕೀಯ ಜೀವನ ಕೊನೆಯಾಗುತ್ತಿತ್ತು. ಸ್ಪೀಕರ್ ರಾಜಕೀಯ ಷಡ್ಯಂತ್ರ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆದ್ದರಿಂದ ಇದು ಹಕ್ಕುಚ್ಯುತಿಯ ವ್ಯಾಪ್ತಿಗೆ ಬರುತ್ತದೆ. ಸುಧಾಕರ್ ವಿರುದ್ಧ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದರು. ಬಳಿಕ ಸ್ಪೀಕರ್ ಅವರು ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.