ಪ್ರಯಾಗ್ ರಾಜ್: 12 ವರ್ಷಗಳಿಗೊಮ್ಮೆ ಪ್ರಯಾಗ್ ರಾಜ್ ನಲ್ಲಿ ನಡೆಯುವ ಮಹಾ ಕುಂಭಮೇಳಕ್ಕೆ ಇಂದು ಅದ್ಧೂರಿ ಚಾಲನೆ ದೊರೆತಿದ್ದು, ಜಗತ್ತಿನ ಈ ಅತೀ ದೊಡ್ಡ ಧಾರ್ಮಿಕ ಪವಿತ್ರ ಕಾರ್ಯಕ್ರಮದಲ್ಲಿ ಬರೊಬ್ಬರಿ 45 ಕೋಟಿ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.
ಹೌದು.. ಪ್ರಯಾಗ್‌ರಾಜ್‌ನ ಗಂಗಾನದಿ ತಟದಲ್ಲಿ ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಉತ್ಸವ ಮಹಾಕುಂಭ ಮೇಳವು ಇಂದಿನಿಂದ ಆರಂಭವಾಗಿದ್ದು, ಸಾಧು–ಸಂತರು ಸೇರಿ ಬರೊಬ್ಬರಿ 45 ಕೋಟಿಯಷ್ಟು ಭಕ್ತರ ಮಹಾಪೂರವೇ ಇಲ್ಲಿಗೆ ಹರಿದು ಬರುತ್ತಿದೆ. ಜನವರಿ 13ರಿಂದ ಫೆಬ್ರವರಿ ಫೆಬ್ರುವರಿ 26ರವರೆಗೆ 45 ದಿನ ನಡೆಯುವ ಮೇಳದಲ್ಲಿ ದೇಶ–ವಿದೇಶಗಳಿಂದ ಭಕ್ತರು ಭಾಗವಹಿಸಲಿದ್ದಾರೆ.
ಗಂಗಾ, ಯಮುನಾ ನದಿಗಳ ಸಂಗಮ ಸ್ಥಳ. ಗುಪ್ತಗಾಮಿನಿಯಾದ ಸರಸ್ವತಿ ನದಿಯೂ ಪ್ರಯಾಗ್‌ರಾಜ್‌ನಲ್ಲಿ ಸಂಗಮಿಸುತ್ತಾಳೆ ಎಂಬ ನಂಬಿಕೆ ಇದೆ. ಪುಷ್ಯ ಪೂರ್ಣಿಮೆಯ ಪವಿತ್ರ ದಿನದಂದು ಮಹಾಕುಂಭ (ಪವಿತ್ರ) ಸ್ನಾನ ಮಾಡುವುದು ಭಕ್ತಾದಿಗಳ ಬಯಕೆಯಾಗಿದೆ. 2019ರಲ್ಲಿ ಕುಂಭ ಮೇಳ ನಡೆದಿತ್ತು. ಈ ಬಾರಿ ನಡೆಯುತ್ತಿರುವುದು 12 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭ ಮೇಳ.
ಹಿಂದಿನ ಬಾರಿ ಕುಂಭ ಮೇಳದಲ್ಲಿ 24 ಕೋಟಿ ಮಂದಿ ಭಾಗವಹಿಸಿದ್ದರು. ಈ ಬಾರಿ ಮಹಾಕುಂಭ ಮೇಳದಲ್ಲಿ 45 ಕೋಟಿ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಅದಕ್ಕೆ ತಕ್ಕಂತೆ ಉತ್ತರ ಪ್ರದೇಶ ಸರ್ಕಾರವು ಸಿದ್ಧತೆಗಳನ್ನು ಮಾಡಿಕೊಂಡಿದೆ. ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದ ಆಸುಪಾಸು 10 ಸಾವಿರ ಎಕರೆಯಷ್ಟು ವಿಸ್ತೀರ್ಣದಲ್ಲಿ ಸಿದ್ಧತೆ ಕೈಗೊಳ್ಳಲಾಗಿದ್ದು, 25 ವಲಯಗಳನ್ನಾಗಿ ವಿಂಗಡಿಸಲಾಗಿದೆ.
ಮಹಾ ಕುಂಭ ಮೇಳದಲ್ಲಿ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಉತ್ತರ ಪ್ರದೇಶ ಪೊಲೀಸರು ನಗರದಾದ್ಯಂತ ಬೃಹತ್ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದಾರೆ. ಅಹಿತಕರ ಘಟನೆಗಳು ನಡೆಯದಂತೆ ಸಾಮಾಜಿಕ ಮಾಧ್ಯಮಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಅನಪೇಕ್ಷಿತ ಪೋಸ್ಟ್‌ಗಳನ್ನು ಪತ್ತೆ ಹಚ್ಚಿ, ಅವು ಹರಡದಂತೆ ತಡೆಯಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರದ ನಡುವೆ ಅತ್ಯುತ್ತಮ ಸಮನ್ವಯ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚುವರಿ ಶೌಚಾಲಯಗಳು ಮತ್ತು ನೈರ್ಮಲ್ಯ ಸೌಲಭ್ಯಗಳೊಂದಿಗೆ ಯಾತ್ರಿಕರಿಗೆ ಅವಕಾಶ ಕಲ್ಪಿಸಲು ಅಧಿಕಾರಿಗಳು 150,000 ಡೇರೆಗಳನ್ನು ಸ್ಥಾಪಿಸಿದ್ದಾರೆ. ಕನಿಷ್ಠ 450,000 ಹೊಸ ವಿದ್ಯುತ್ ಸಂಪರ್ಕಗಳನ್ನು ಸ್ಥಾಪಿಸಲಾಗಿದ್ದು, ಕುಂಭ ಮೇಳವು ಈ ಪ್ರದೇಶದ 100,000 ನಗರ ಅಪಾರ್ಟ್‌ಮೆಂಟ್‌ಗಳು ಒಂದು ತಿಂಗಳಲ್ಲಿ ಬಳಸುವುದಕ್ಕಿಂತ ಹೆಚ್ಚಿನ ವಿದ್ಯುತ್ ಅನ್ನು ಬಳಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಭಕ್ತರಿಗಾಗಿ ಹಲವಾರು ವಿದ್ಯುತ್ ಬಸ್‌ಗಳು ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಸಹ ಸ್ಥಾಪಿಸಲಾಗಿದೆ. ಭಾರತೀಯ ರೈಲ್ವೆಯು ಹಬ್ಬದ ಸಮಯದಲ್ಲಿ 3,300 ಟ್ರಿಪ್‌ಗಳನ್ನು ಮಾಡುವ 98 ವಿಶೇಷ ರೈಲುಗಳನ್ನು ಪರಿಚಯಿಸಿದೆ.
ಇದರ ಹೊರತಾಗಿ, ಅಧಿಕಾರಿಗಳು ನಗರದಲ್ಲಿ 92 ರಸ್ತೆಗಳ ನವೀಕರಣ, 30 ಸೇತುವೆಗಳ ನಿರ್ಮಾಣ ಮತ್ತು 800 ಬಹುಭಾಷಾ ಫಲಕಗಳ ಸ್ಥಾಪನೆಯನ್ನು ಮಾಡಿದ್ದಾರೆ. ಆರೋಗ್ಯ ಸೌಲಭ್ಯಗಳಿಗಾಗಿ, ಶಸ್ತ್ರಚಿಕಿತ್ಸಾ ಮತ್ತು ರೋಗನಿರ್ಣಯ ಸೌಲಭ್ಯಗಳನ್ನು ಹೊಂದಿರುವ ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ. ಮಹಾಕುಂಭ ಮೇಳಕ್ಕಾಗಿ ಮಹಾಕುಂಭ ನಗರ ಎನ್ನುವ ತಾತ್ಕಾಲಿಕ ನಗರವನ್ನೇ ಸೃಷ್ಟಿಸಲಾಗಿದ್ದು, ಈ ಪ್ರದೇಶವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಗಿದೆ. ಪ್ರತಿ ದಿನ ಇಲ್ಲಿ 50 ಲಕ್ಷದಿಂದ 1 ಕೋಟಿ ಭಕ್ತರಿಗೆ ತಂಗುವ ವ್ಯವಸ್ಥೆ ಮಾಡಲಾಗಿದೆ.
ಈ ಹಿಂದೆ ಅಂದರೆ 2019 ರಲ್ಲಿ ನಡೆದ ಪ್ರಯಾಗ್‌ರಾಜ್‌ನ ಅರ್ಧ ಕುಂಭಮೇಳದಿಂದಾಗಿ ಉತ್ತರ ಪ್ರದೇಶ ರಾಜ್ಯಕ್ಕೆ 1.2 ಲಕ್ಷ ಕೋಟಿ ರೂ. ಆದಾಯ ಬಂದಿತ್ತು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದರು. 2019 ರಲ್ಲಿ ನಡೆದ ಅರ್ಧ ಕುಂಭಮೇಳವು ಸುಮಾರು 24 ಕೋಟಿ ಭಕ್ತರನ್ನು ಆಕರ್ಷಿಸಿತ್ತು.