ಕಾನೂನು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿ ಸ್ವಾಮಿ ಚಿನ್ಮಯಾನಂದ ಆರೋಗ್ಯ ಸ್ಥಿತಿ ಗಂಭೀರ

ಶಹಜಾನಪುರ್, ಸೆ 18     ಉತ್ತರ ಪ್ರದೇಶದ  ಕಾನೂನು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ  ಎದುರಿಸುತ್ತಿರುವ  ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ  ಆರೋಗ್ಯ  ಗಂಭೀರವಾಗಿದೆ ಎಂದು ವರದಿಯಾಗಿದೆ. 

ಸ್ವಾಮಿ ಚಿನ್ಮಯಾನಂದ  ಅವರ  ಆರೋಗ್ಯ ಕುರಿತು ತಜ್ಞ ವೈದ್ಯರ ತಂಡ ನಿಗಾವಹಿಸಿದ್ದು,  ಅವರ ರಕ್ತದಲ್ಲಿ ಸಕ್ಕರೆ  ಏರುಪೇರಾಗುತ್ತಿರುವುದು  ಚಿಕಿತ್ಸೆ ಕಲ್ಪಿಸಲು  ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ.   ಸೋಮವಾರ ರಾತ್ರಿ ದಿಢೀರ್ ಅಸ್ವಸ್ಥಗೊಂಡ  ಸ್ವಾಮಿ  ಅವರಿಗೆ  ನಿವಾಸದಲ್ಲೇ ವೈದ್ಯರು ಚಿಕಿತ್ಸೆ ಕಲ್ಪಿಸುತ್ತಿದ್ದಾರೆ.  

ಸಂತ್ರಸ್ಥೆ ಕಾನೂನು ವಿದ್ಯಾರ್ಥಿನಿ,  ಸೋಮವಾರ  ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿ,  ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದ  ಹಲವು ಬಾರಿ  ತಮ್ಮ ಮೇಲೆ  ಲೈಂಗಿಕ ದೌರ್ಜನ್ಯ ನಡೆಸಿದ್ದರು.  ವಿಡಿಯೋ  ತೋರಿಸಿ  ಬ್ಲಾಕ್ ಮೇಲ್ ಮಾಡುತ್ತಿದ್ದರು  ಎಂದು  ಮ್ಯಾಜಿಸ್ಟ್ರೇಟ್   ಮುಂದೆ ಹೇಳಿಕೆ ನೀಡಿ ಕೆಲವು ಪುರಾವೆ ಒದಗಿಸಿದ್ದರು.  

ಆಕೆ ತನ್ನ  ಹೇಳಿಕೆಯನ್ನು  ಅಪರಾಧ ದಂಡ ಸಂಹಿತೆ  ಸೆಕ್ಷನ್  164ರಡಿ  ದಾಖಲಿಸಿದ್ದು, ಪೊಲೀಸರು  ತಕ್ಷಣವೇ ಸ್ವಾಮಿ ಅವರನ್ನು  ಬಂಧಿಸಬೇಕಿದೆ. ಪೊಲೀಸರು ಚಿನ್ಮಯಾನಂದ ವಿರುದ್ದ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ  ಪೊಲೀಸರ ಕಾರ್ಯನಿರ್ಹಹಣೆಯ ಮೇಲೆಯೇ ಸಂಶಯ ಬರುತ್ತಿದೆ ಎಂದು ಸಂತ್ರಸ್ಥೆಯ ಕುಟುಂಬ ಸದಸ್ಯರು  ದೂರಿದ್ದಾರೆ. 

ಸುಪ್ರೀಂ ಕೋರ್ಟ್ ಆದೇಶದಂತೆ  ಚಿನ್ಮಯಾನಂದ ಪ್ರಕರಣದ ತನಿಖೆಗೆ  ಎಸ್ ಐಟಿ ರಚಿಸಲಾಗಿದ್ದು, ಸರ್ಕಾರಕ್ಕೂ ತನಿಖೆಗೂ ಯಾವುದೇ ಸಂಬಂಧ ಇಲ್ಲ ಎಂದು  ಸರ್ಕಾರ ಹೇಳಿದೆ.