ಲೋಕದರ್ಶನ ವರದಿ
ಮುದ್ದೇಬಿಹಾಳ 24: ಇಲ್ಲಿನ ಬಸವೇಶ್ವರ ವೃತ್ತದಲ್ಲಿರುವ ರಾಜಸ್ತಾನ ಸೇಡಜಿ ಹುನಾಮ್ಜಿ ರಾಜಪುರೋಹಿತ ಅವರಿಗೆ ಸೇರಿದ ಮಹಾಲಕ್ಷ್ಮೀ ಕಿರಾಣಿ ಮತ್ತು ಜನರಲ್ ಸ್ಟೋರ್ಸ ಅಂಗಡಿ ಮೇಲೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಅಧಿಕಾರಿ ಶಂಕರಗೌಡ ಕಂತಲಗಾಂವಿ ನೇತೃತ್ವದ ತಂಡ ರವಿವಾರ ದಾಳಿ ನಡೆಸಿ ಕಳಪೆ ಆರೋಪ ಕೇಳಿಬಂದ ಬೆಲ್ಲವನ್ನು ವಶಕ್ಕೆ ಪಡೆದುಕೊಂಡಿದ್ದೂ ಅಲ್ಲದೆ ಈ ಕುರಿತು ಮೂವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.ಮುದ್ದೇಬಿಹಾಳ ತಾಲೂಕಿನ ಕೆಸಾಪುರ ಗ್ರಾಮದ ಗದ್ದೆಪ್ಪ ಬೋಯೇರ ಎನ್ನುವವರ ತಾಯಿ ಗುರುವಾರ ಈ ಅಂಗಡಿಯಿಂದ ಬೆಲ್ಲ ಖರೀದಿಸಿದ್ದರು. ಶನಿವಾರ ಸಂಜೆ ಸಜ್ಜಕ ಮಾಡಲು ಬೆಲ್ಲವನ್ನು ನೀರಿನಲ್ಲಿ ಕುದಿಸುವಾಗ ನೀರು ಕಪ್ಪು ಬಣ್ಣಕ್ಕೆ ತಿರುಗಿತ್ತು. ಇದರಿಂದ ಸಂಶಯಗೊಂಡ ಗದ್ದೆಪ್ಪ ಅವರು ಆಹಾರ ಗುಣಮಟ್ಟದ ಸುರಕ್ಷತಾ ಅಧಿಕಾರಿಗೆ ದೂರು ಸಲ್ಲಿಸಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿ ಈ ದಾಳಿ ನಡೆಸಲಾಗಿತ್ತು. ದಾಳಿ ವೇಳೆ ಕಳಪೆ ಗುಣಮಟ್ಟದ ಆರೋಪ ಕೇಳಿಬಂದ ಬೆಲ್ಲದ ಸ್ಯಾಂಪಲ್ಗಳನ್ನು ಹೆಚ್ಚಿನ ತಪಾಸಣೆಗೆ ಪ್ರಯೋಗಾಲಯಕ್ಕೆ ಕಳಿಸಲಾಯಿತು. ಅಂಗಡಿಯಲ್ಲಿ ಉಳಿದಿದ್ದ ಅಂದಾಜು ಒಂದು ಕ್ವಿಂಟಾಲ್ ಬೆಲ್ಲವನ್ನು ಮುಂದಿನ ಆದೇಶದ ತನಕ ಗ್ರಾಹಕರಿಗೆ ಮಾರಾಟ ಮಾಡದಂತೆ ಸೂಚಿಸಿ ಅದೆಲ್ಲವನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ಈ ಬೆಲ್ಲದಲ್ಲಿ ಅತಿ ಹೆಚ್ಚಿನ ಪ್ರಮಾಣದ ರಾಸಾಯನಿಕ ಬಳಸಿ ಮಾನವನ ಆರೋಗ್ಯಕ್ಕೆ ಅಪಾಯಕಾರಿ ಅಂಶ ಒಳಗೊಂಡಿರುವ ವರದಿ ಬಂದಲ್ಲಿ ಬೆಲ್ಲ ಮಾರಾಟ ಮಾಡಿದವರ ವಿರುದ್ಧ ಗಂಭೀರ ಸ್ವರೂಪದ ಪ್ರಕರಣ ದಾಖಲಿಸಲಾಗುತ್ತದೆ. ಈಗ ಈ ಅಂಗಡಿಯಲ್ಲಿ ಮಾರಾಟವಾಗಿರುವ ಬೆಲ್ಲ ಮಂಡ್ಯದ ಎಪಿಎಂಸಿಯಿಂದ ಪೂರೈಕೆಯಾಗಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದ್ದು ಹೆಚ್ಚಿನ ವಿವರವನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.