ಒಂಬತ್ತು ತಿಂಗಳ ಬಳಿಕ ಭೂಮಿಗೆ ಮರಳಿ ಮರಳಿದ ಸುನಿತಾ ವಿಲಿಯಮ್ಸ್ ಮತ್ತು ತಂಡ

Sunita Williams and team return to Earth after nine months

ಕೇಪ್ ಕೆನವೆರಲ್ 19: ಒಂಬತ್ತು ತಿಂಗಳ ಬಳಿಕ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಬಾಹ್ಯಾಕಾಶ ವಿಮಾನ ನಿಲ್ದಾಣದಿಂದ ಭೂಮಿಗೆ ಮರಳಿದ್ದಾರೆ.

ಬಾಹ್ಯಾಕಾಶದಲ್ಲಿ ಸಿಲುಕಿಕೊಂಡ ನಾಸಾ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಮಂಗಳವಾರ ಭೂಮಿಗೆ ಮರಳಿದ್ದು, 9 ತಿಂಗಳ ನಂತರ ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 3:27ಕ್ಕೆ ಬಾಹ್ಯಾಕಾಶದಿಂದ ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ.

ಇಬ್ಬರೂ ಕಳೆದ ವರ್ಷ ಜೂನ್‌ನಲ್ಲಿ ಬಾಹ್ಯಾಕಾಶಕ್ಕೆ ಪಯಣಿಸಿದ್ದರು. ತಾಂತ್ರಿಕ ತೊಂದರೆಗಳು ಮತ್ತು ವೇಳಾಪಟ್ಟಿಯಲ್ಲಿನ ಬದಲಾವಣೆಗಳಿಂದಾಗಿ ಅವರ ಮರಳುವಿಕೆ ವಿಳಂಬವಾಗಿತ್ತು. ಕೆಲವೇ ದಿನಗಳ ಈ ಕಾರ್ಯಾಚರಣೆ 9 ತಿಂಗಳಿಗೆ ವಿಸ್ತರಣೆಗೊಂಡಿತ್ತು.

ಇದೀಗ ಇಬ್ಬರೂ ಸುರಕ್ಷಿತವಾಗಿ ಮರಳುವುದರೊಂದಿಗೆ ಕೊನೆಗೊಂಡಿದೆ.

ಸುನಿತಾ ವಿಲಿಯಮ್ಸ್ ಹುಟ್ಟೂರಿನಲ್ಲಿ ಸಂಭ್ರಮ

ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ಭೂಮಿಗೆ ಸುರಕ್ಷಿತವಾಗಿ ಮರಳುತ್ತಿದ್ದಂತೆ ಹುಟ್ಟೂರಾದ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಜೂಲಾಸನ್ ಗ್ರಾಮದಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. 

ಗ್ರಾಮಸ್ಥರು ಗ್ರಾಮದ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿ, ಸುನಿತಾ ಅವರು ಸುರಕ್ಷಿತವಾಗಿ ಬಂದಿಳಿಯುತ್ತಿದ್ದಂತೆ ‘ಹರ ಹರ ಮಹಾದೇವ’ ಎಂದು ಕೂಗಿದ ಜನ, ನೃತ್ಯ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.