ರಾಣೇಬೆನ್ನೂರು01: ಇಂದಿನ ವಿದ್ಯಾರ್ಥಿಗಳಲ್ಲಿ ಅಗಾಧವಾದ ಪ್ರತಿಭೆಗಳಿವೆ. ಬದಲಾದ ವಾತಾವರಣಕ್ಕೆ ತಕ್ಕಂತೆ ಕಾಲೇಜಿನಲ್ಲಿ ಪೂರಕವಾದ ಸೌಲಭ್ಯಗಳನ್ನು ಕಲ್ಪಿಸುವ ಹೊಣೆ ಕಾಲೇಜು ಮತ್ತು ಸಮಾಜದ ಪ್ರತಿಯೊಬ್ಬ ಮನುಷ್ಯರು ಹೊರಬೇಕಾಗಿದೆ. ಅಂದಾಗ ಮಾತ್ರ ಶಿಕ್ಷಣ ಸಮರ್ಪಕ ಹೊಂದಲು ಸಹಕಾರಿಯಾಗಲಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ಅವರು ಶನಿವಾರ ಸಂಜೆ ನಗರ ಹೊರವಲಯ ಮಾರುತಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಸಕ ಪೂಜಾರ ಅವರು ನಿರ್ಮಿಸಿದ ನೂತನ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದರು.
ಸರ್ಕಾರಿ ಕಾಲೇಜಿನಲ್ಲಿ ಕಲಿಯುವ ವಿದ್ಯಾರ್ಥಿಗಳು ಬಹುತೇಕವಾಗಿ ಗ್ರಾಮಾಂತರ ಪ್ರದೇಶಗಳಿಂದ ಬರುತ್ತಾರೆ. ಕಾಲೇಜು ನಗರದಿಂದ ದೂರವಿರುವ ಕಾರಣ ಎಲ್ಲ ರೀತಿ ಸೌಲಭ್ಯವನ್ನು ಕಲ್ಪಿಸಲು ತಾವು ಕಳೆದ ಬಾರಿ ಬಂದಾಗ ಇಲ್ಲಿ ಆಗಬಹುದಾದ ಸೌಕರ್ಯಗಳ ಕುರಿತು ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ತಮ್ಮ ಗಮನಕ್ಕೆ ತಂದಿದ್ದರು. ಅಂದು ತಾವು ನೀಡಿದ ಭರವಸೆಯಂತೆ ಕೇವಲ 15ದಿವಸಗಳಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದರ ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.
ಮುಂದಿನ ದಿನಗಳಲ್ಲಿ ಬಜೆಟ್ ಮಂಡನೆ ನಂತರ ಕಾಲೇಜಿಗೆ 100 ಬೆಂಚುಗಳು ಮತ್ತು ಸುತ್ತಲೂ ಕಂಪೌಡ್ ಗೋಡೆಯನ್ನು ನಿರ್ಮಿಸಿಕೊಡುವ ಭರವಸೆ ಶಾಸಕರು ನೀಡಿದರು. ಸಮಾರಂಭದ ಅಧ್ಯಕ್ಷತೆವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ|| ಜಿ.ಬಿ.ಬೆಳವಗಿ ಮತ್ತು ಶಾಸಕ ಅರುಣಕುಮಾರ ಪೂಜಾರ ಸೇರಿದಂತೆ ಮತ್ತಿತರ ಗಣ್ಯರನ್ನು ಶಾಲಾ ಅಭಿವೃದ್ಧಿ ಮಂಡಳಿಯ ಪರವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ನಗರಸಭಾ ಸದಸ್ಯರಾದ ಶೇಖಪ್ಪ ಹೊಸಗೌಡ್ರ, ಪ್ರಕಾಶ ಪೂಜಾರ, ಎಸ್.ಡಿ.ಎಂ.ಸಿಅದ್ಯಕ್ಷ ರಮೇಶ ಕೊಂಡಜ್ಜಿ, ಜಿಪಂ ಅಭಿಯಂತ ರಾಮಕೃಷ್ಣ, ರಾಜಪ್ಪ, ಕಬೀರ್, ಬಸವರಾಜಪ್ಪ, ಚೋಳಪ್ಪ ಕಸವಾಳ, ವಿಜಯಕುಮಾರ ಸೇರಿದಂತೆ ಉಪನ್ಯಾಸಕರು, ಮೊದಲಾದ ಗಣ್ಯರು ಉಪಸ್ಥಿತರಿದ್ದರು.