ವರದಿ: ಎಂ.ಬಿ. ಘಸ್ತಿ
ಸಂಕೇಶ್ವರ 20: ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರವು ವಿಫಲವಾದ ಹಿನ್ನಲೆಯಲ್ಲಿ ದಿ: 10 ರಂದು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಹುಕ್ಕೇರಿ ತಾಲೂಕಿನ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು ಕರೆ ನೀಡಿ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸಿದ್ದಾರೆ.
ಇದರಿಂದ ಸಾರ್ವಜನಿಕರಿಗೆ ಮತ್ತು ರೈತಾಪಿ ವರ್ಗದವರಿಗೆ ಸಾಕಷ್ಟು ಅನಾನೂಕೂಲತೆ ಉಂಟಾಗಿದೆ, ಮಾರ್ಚ ತಿಂಗಳದಲ್ಲಿ ಸಹಕಾರಿ ಸಂಘಗಳಲ್ಲಿ ಸಾಲದ ಬೋಜಾಗಳನ್ನು ದಾಖಲ ಮಾಡಲು ರೈತರು ತಾಲೂಕಾ ಕಛೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮುಷ್ಕರದ ಎಲ್ಲ ಪದಾಧಿಕಾರಿಗಳನ್ನು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಮತ್ತು ರಾಜ್ಯ ಕಂದಾಯ ನೌಕರರ ಅಧ್ಯಕ್ಷರು ಸಮಾಲೋಚನೆ ನಡೆಸಿದರು. ತಮ್ಮ 23 ಬೇಡಿಕೆಗಳ ಪೈಕಿ ಕೆಲವೊಂದು ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸುತ್ತೇವೆಂದು ಹೇಳಿದರು.
ಆದರೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಇನ್ನುವರೆಗೆ ಯಾವುದೇ ಲಿಖಿತ ರೂಪದಲ್ಲಿ ಆದೇಶಗಳು ತಲುಪಿಲ್ಲ ಆದ ಕಾರಣ ಈ ಮುಷ್ಕರವು ತೀವ್ರ ಸ್ವರೂಪಗೊಂಡಿದೆ ಎಂದು ಹುಕ್ಕೇರಿ ತಾಲೂಕಾ ಗ್ರಾಮ ಆಡಳಿತದ ಅಧ್ಯಕ್ಷ ಉಮೇಶ ನಾಗರಾಳೆ ಇವರು ಲೋಕದರ್ಶನ ಪ್ರತಿನಿಧಿಗೆ ತಿಳಿಸಿದರು. ಈ ಬೇಡಿಕೆಗಳ ಬಗ್ಗೆ ಕರ್ನಾಟಕ ರಾಜ್ಯದ ಕಂದಾಯ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಇವರನ್ನು ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲ ಪದಾಧಿಕಾರಿಗಳು ಭೆಟ್ಟಿ ಮಾಡಿದಾಗ, ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆ ಬೇಡಿಕೆಗಳ ಬಗ್ಗೆ ನಮ್ಮದು ಸಂಪೂರ್ಣ ಬೆಂಬಲ ಇರುತ್ತದೆ ಮತ್ತು ಸಂಬಂಧಪಟ್ಟ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಇವರಿಗೂ ಸಹ ತಾವು ಮಾತುಕತೆ ನಡೆಸುವುದಾಗಿ ಹೇಳಿದರು.
ಈ ಮುಷ್ಕರವು ಹುಕ್ಕೇರಿಯ ತಹಶೀಲ್ದಾರ ಕಛೇರಿಯ ಹೊರಂಗಾಣದಲ್ಲಿ ಆರಂಭಗೊಂಡಿದೆ. ಹುಕ್ಕೇರಿಯ ತಹಶೀಲ್ದಾರ ಮಂಜುಳಾ ನಾಯಿಕ ಮತ್ತು ಹುಕ್ಕೇರಿ ಮತಕ್ಷೇತ್ರದ ಶಾಸಕ ನೀಖೀಲ ಉಮೇಶ ಕತ್ತಿ ಮತ್ತು ಬೆಳಗಾವಿಯ ಅಸಿಸ್ಟಂಟ ಕಮೀಶನರ ನಾಯಿಕ ಇವರು ಸಹ ಮುಷ್ಕರದ ಸ್ಥಳಕ್ಕೆ ಭೆಟ್ಟಿ ನೀಡಿ ಅವರ ಬೇಡಿಕೆಗಳನ್ನು ಸರ್ಕಾರಕ್ಕೆ ಕಳುಹಿಸಿಕೊಡುತ್ತೇವೆಂದು ಮುಷ್ಕರದಲ್ಲಿ ಪಾಲ್ಗೊಂಡ ಪದಾಧಿಕಾರಿಗಳಿಗೆ ಹಾಗೂ ಉಮೇಶ ನಾಗರಾಳಿ ಮತ್ತು ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳಿಗೆ ತಿಳಿಹೇಳಿದರು.