ಕಾರವಾರ 06: ಕಾರವಾರ ನಗರದ ರಾಷ್ಟ್ರೀಯ ಹೆದ್ದಾರಿ ಪ್ಲೈ ಓವರ್ ಕೆಳಭಾಗದಲ್ಲಿ ಹಾಗೂ ಕಾರವಾರದ ರವೀಂದ್ರನಾಥ ಠಾಗೋರ ಕಡಲ ತೀರದಲ್ಲಿ ಕೇಲವು ದುಷ್ಕ್ಕರ್ಮಿಗಳು ವಿಶೇಷವಾಗಿ ಸಂಜೆ ಸಮಯದಲ್ಲಿ ಗುಂಪು ಗುಂಪಾಗಿ ಕುಳಿತು ಅಥವಾ ಅವರ ಸ್ವಂತ ವಾಹನದಲ್ಲಿ ಕುಳಿತು ಮಧ್ಯಪಾನ ಸೇವನೆ ಮಾಡುತ್ತಿರುವುದು ತದನಂತರ ಬಾಟಲ್‌ಗಳನ್ನು, ಗ್ಲಾಸ್‌ಗಳನ್ನು ಅಲ್ಲೇ ಎಸೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಅನೇಕ ದೂರುಗಳು ಸ್ವೀಕರಿಸಲಾಗುತ್ತಿದೆ.
ಇಂತಹ ಅಸಮಾಜಿಕ ಚಟುವಟಿಕೆಗಳಿಂದ ಕಡಲ ತೀರಕ್ಕೆ ಆಗಮಿಸುವ ವಿಹಾರಿಗಳಿಗೆ ಅಥವಾ ಕುಟುಂಬಸ್ಥರಿಗೆ ತೀವು ಅನಾನೂಕೂಲತೆ ಆಗುವುದು ಮಾತ್ರವಲ್ಲದೇ ಭಯದ ವಾತಾವರಣ ಉಂಟಾಗಿರುತ್ತದೆ. ಈ ರೀತಿಯ ಕೃತ್ಯಗಳಿಂದ ಪ್ರವಾಸೋದ್ಯಮ ಚಟುವಟಿಕೆಗಳ ಮೇಲು ಸಹ ಪ್ರತಿಕೂಲ ಪರಿಣಾಮ ಬೀಳುವ ಸಂಭವ ಇರುತ್ತದೆ. ಇದನ್ನು ತಡೆಗಟ್ಟುವ ದೃಷ್ಟಿಯಿಂದ ಕಂದಾಯ, ಆರಕ್ಷಕ, ನಗರಸಭೆ ಮತ್ತು ಅಬಕಾರಿ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿ ನಿರಂತರ ಗಸ್ತು ತಿರುಗಲು ನಿರ್ದೇಶನ ನೀಡಲಾಗಿದೆ.ಇದರ ಅಂಗವಾಗಿ ಸಹಾಯಕ ಕಮೀಷನರ್ ಕಾರವಾರ ಮತ್ತು ತಹಶೀಲ್ದಾರ ಕಾರವಾರ ಒಳಗೊಂಡಂತೆ ತಂಡವು ಮೊದಲ ಕಾರ್ಯಚರಣೆಯನ್ನು ಎಪ್ರಿಲ್ 4 ರಂದು ನಡೆಸಿದ್ದು ಪ್ಲೈ ಓವರ್ ಕೆಳಗಡೆ ಮತ್ತು ಕಡಲ ತೀರದಲ್ಲಿ ಗಸ್ತು ತಿರುಗಿ ಈ ರೀತಿಯ ಅಸಭ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಧ್ಯಪಾನ ಸೇವನೆ ಮಾಡುತ್ತಿರುವವರ ವಿರುದ್ಧ ವಿವಿಧ ಕಾಯ್ದೆಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಪೊಲೀಸ್ ಇಲಾಖೆಯವರು 5 ಪ್ರಕರಣ ದಾಖಲಿಸಿ ಒಟ್ಟೂ ರೂ. 500 ಗಳನ್ನು ದಂಡದ ರೂಪದಲ್ಲಿ ಸಂಗ್ರಹಿಸಿದ್ದು, ನಗರಸಭೆ ಕಾರವಾರ 2 ಪ್ರಕರಣ ದಾಖಲಿಸಿ ಒಟ್ಟೂ ರೂ. 200.00 ಹಾಗೂ ಅಬಕಾರಿ ಇಲಾಖೆ ಕಾರವಾರ 2 ಪ್ರಕರಣ ದಾಖಲಿಸಿ ಒಟ್ಟೂ 2,400 ದಂಡ ವಿಧಿಸಿದ್ದು, ಈ ಕಾರ್ಯಚರಣೆಯಲ್ಲಿ ಒಟ್ಟೂ 9 ಆಪಾದಿತರಿಗೆ ಒಟ್ಟೂ ರುಪಾಯಿ 3,100.00 ದಂಡ ವಿಧಿಸಲಾಗಿದೆ.ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸಿ ಅಥವಾ ಮಧ್ಯಪಾನ ಸೇವಿಸಿ ಅನಾಗರಿಕತೆಯನ್ನು ತೊರಿಸುವವರ ವಿರುದ್ಧ ಕರ್ನಾಟಕ ಪೌರಸಭೆ ಕಾಯ್ದೆ ಘನ ತ್ಯಜ್ಯ ನಿರ್ವಹಣಾ ಮಾದರಿ ಉಪನಿಯಮಗಳು 2019 ರಡಿಯಲ್ಲಿ, ಕರ್ನಾಟಕ ಅಬಕಾರಿ ಕಾಯ್ದೆ 1965 ಸೆಕ್ಷನ್ 15ಎ ರಡಿಯಲ್ಲಿ ಮತ್ತು ಪೊಲೀಸ್ ಕಾಯ್ದೆ 1963 ರ ಸೆಕ್ಷನ್ 92 (1)(ಅರ್) ರಡಿಯಲ್ಲಿ ದಂಡ ವಿಧಿಸಲು ಅವಕಾಶವಿರುತ್ತದೆ.
ಈ ರೀತಿಯ ತಪ್ಪುಗಳನ್ನು ಮರುಕಳಿಸುವವರ ವಿರುದ್ಧ ಬಿಎನ್‌ಎಸ್‌ಎಸ್ ಕಾಯ್ದೆ 2023 ಕಲಂ 129 ರಡಿಯಲು ಸಹ ಪ್ರಕರಣ ದಾಖಲಿಸಲು ಅವಕಾಶವಿರುತ್ತದೆ.ಆದ್ದರಿಂದ ಸಾರ್ವಜನಿಕರು ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷವಾಗಿ ಕಾರವಾರ ನಗರಸಭೆ ವ್ಯಾಪ್ತಿಯ ಪ್ಲೈ ಓವರ್ ಮೇಲಭಾಗದಲ್ಲಿ ಮತ್ತು ಕೆಳಭಾಗದಲ್ಲಿ, ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಹಾಗೂ ಕಡಲ ತೀರದ ಮೂಲೆ ಮೂಲೆಗಳಲ್ಲಿ ಗುಂಪಾಗಿ ಕುಳಿತು ಮಧ್ಯಪಾನ ಮತ್ತು ಮಾದಕ ದ್ರವ್ಯಗಳ ಸೇವನೆ ಮಾಡಿದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಇದಕ್ಕಾಗಿ ರಚಿಸಿದ ತಂಡಗಳು ನಿರಂತರವಾಗಿ ಗಸ್ತು ತಿರುಗಿ ಇಂತಹ ಕೃತ್ಯಗಳು ನಡೆಯದಂತೆ ಕಾರ್ಯಚರಣೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಎಚ್ಚರಿಸಿದ್ದಾರೆ.