ಸರ್ಕಾರದ ಲೋಪಗಳನ್ನು ತಿಳಿಸಿದ್ದೇವೆ: ಮುಖ್ಯಮಂತ್ರಿ ಭೇಟಿ ಬಳಿಕ ಡಿ.ಕೆ.ಶಿವಕುಮಾರ್ ಹೇಳಿಕೆ

ಬೆಂಗಳೂರು, ಏ.19, ಕೊರೋನಾ ಸೋಂಕು ನಿಯಂತ್ರಿಸುವಲ್ಲಿ ಸರ್ಕಾರದ ಇದುವರೆಗಿನ ಕ್ರಮಗಳಲ್ಲಿ ಸ್ವಲ್ಪ ಲೋಪಗಳಿದ್ದವು. ಅವುಗಳನ್ನು ನಾವು ಸರ್ಕಾರದ ಗಮನ ತಂದಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅವರ ಗೃಹ ಕಚೇರಿ ಕೃಷ್ಣಾದಲ್ಲಿ  ಭೇಟಿ ಮಾಡಸಿದ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ 9 ನಾಯಕರ ನಿಯೋಗದಿಂದ  ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗಿದೆ. ಸರ್ಕಾರಕ್ಕೆ 15 ಬೇಡಿಕೆಗಳನ್ನು  ಇಡಲಾಗಿದೆ. ನಿಯೋಗದ ಎಲ್ಲ ನಾಯಕರೂ ಚರ್ಚಿಸಿದ್ದೇವೆ. ಆರೋಗ್ಯ, ರೈತರು, ಕಾರ್ಮಿಕರು,  ವೃತ್ತಿನಿರತರು, ಆಹಾರ ಧಾನ್ಯ ವಿತರಣೆ, ಅಲ್ಪಸಂಖ್ಯಾತ ಸಮುದಾಯದ ನೋವು, ಗ್ರಾಮೀಣ  ಸಮಸ್ಯೆಗಳು, ರೈತರ ಬೆಳೆಗಳಿಗೆ ಬೆಲೆ ಸಿಗದಿರುವುದು, ಶಿಕ್ಷಣ ಸಮಸ್ಯೆಗಳಬಗ್ಗೆ  ಮುಖ್ಯಮಂತ್ರಿಗಳ  ಗಮನ ಸೆಳೆದಿದ್ದೇವೆ. ಕೋವಿಡ್ ಪರೀಕ್ಷೆ ತೀವ್ರಗೊಳಿಸುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.ಆಹಾರ  ಕಿಟ್ ಗಳ ವಿತರಣೆಯಲ್ಲಿ ತಾರತಮ್ಯ ನಡೆಯುತ್ತಿದ್ದು ಆ ಬಗ್ಗೆಯೂ ಸರ್ಕಾರದ ಗಮನಕ್ಕೆ  ತರಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಸಹಕಾರ ಕೊಡುವ ಭರವಸೆಯನ್ನು ನಾವು  ಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಕೈಗಾರಿಕೆ, ಸರ್ಕಾರಿ, ಖಾಸಗಿ ನೌಕರರ ಸಮಸ್ಯೆ,  ಬ್ಯಾಂಕ್ ವಲಯದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು. ಒಂದು ವರ್ಗಕ್ಕೆ  ತೇಜೋವಧೆ ಆದ ಬಗ್ಗೆ ನಾವು ಒತ್ತು ಕೊಟ್ಟು ಹೇಳಿದ್ದೇವೆ ಎಂದರು.
ಸರ್ಕಾರದ  ಸಚಿವರು, ಅಧಿಕಾರಿಗಳ‌ಲ್ಲಿ ಸಮನ್ವಯತೆ ಕೊರತೆಯಿದೆ. ಯಡಿಯೂರಪ್ಪ ಶೇ.33 ರಷ್ಟು ಐಟಿ ಬಿಟಿ  ಕೆಲಸ ಎನ್ನುತ್ತಾರೆ. ಆದರೆ ಅವರದ್ದೇ ಸರ್ಕಾರದ ಒಬ್ಬ ಮಂತ್ರಿಗಳು ಶೇ.50 ರಷ್ಟು  ಐಟಿ-ಬಿಟಿಗೆ ಅವಕಾಶ ಎನ್ನುತ್ತಿದ್ದಾರೆ. ಈ  ವಿಚಾರದಲ್ಲಿ ನಾವು ರಾಜಕೀಯ ಮಾಡಲು  ಹೋಗುವುದಿಲ್ಲ. ಸರ್ಕಾರದಲ್ಲಿ ಲೋಪಗಳು ಇರುವುದರಿಂದಲೇ ನಾವು ಮುಖ್ಯಮಂತ್ರಿಗಳನ್ನು ಭೇಟಿ  ಮಾಡಿದ್ದೇವೆ ಎಂದು ಶಿವಕುಮಾರ್ ಹೇಳಿದರು.