ಪರಿಶಿಷ್ಟ ಜಾತಿ, ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷೆ ಪಲ್ಲವಿ ಜೆ. ಭೇಟಿ ಪರೀಶೀಲನೆ ಮೂಲಭೂತ ಸೌಲಭ್ಯ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ
ನರಗುಂದ 08 : ಪಟ್ಟಣದ ಹರಣಶಿಕಾರಿ, ಘಂಟಿಚೋರ ಜನಾಂಗದ ಹಲವು ಕುಟುಂಬಸ್ಥರು ಸ್ವಂತ ಸೂರು, ನಿವೇಶನ, ಉದ್ಯೋಗ, ಉನ್ನತ ಶಿಕ್ಷಣ, ಶುಚಿತ್ವ, ಕುಡಿಯಲು ಶುದ್ಧ ನೀರಿನ ಸೌಲಭ್ಯವನ್ನು ಸಂಬಂಧಿಸಿದ ಅಧಿಕಾರಿಗಳು ಕಲ್ಪಿಸುವಂತೆ ಪರಿಶಿಷ್ಟ ಜಾತಿ, ಪ.ಪಂಗಡ, ಅಲೆಮಾರಿ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷೆ ಪಲ್ಲವಿ ಜೆ. ಅಧಿಕಾರಿಗಳಿಗೆ ಸೂಚಿಸಿದರು. ನರಗುಂದ ಪಟ್ಟಣದ ಎನ್‌ಎಚ್ಟಿ ಮಿಲ್ ಕ್ವಾಟರ್ಸ್ನ ಹರಣಶಿಕಾರಿ, ಘಂಟಿಚೋರ, ಮೇದಾರ, ಅಂಬಿಗೇರ ಮುಂತಾದ ಅಲೇಮಾರಿ ಜನಾಂಗದವರ ಕಾಲೋನಿಗೆ ಶನಿವಾರ ಭೇಟಿ ನೀಡಿ ಕುಂದುಕೊರತೆಗಳ ಸಭೆಯಲ್ಲಿ ಮಾತನಾಡಿದರು. ಶೌಚಾಲಯಗಳಿಲ್ಲದೆ ಮಹಿಳೆಯರು ಬಹಿರ್ದೆಸೆಗೆ ತೆರಳುತ್ತಾರೆ. ಈ ಬಗ್ಗೆ ಇಲಾಖೆ ಅಧಿಕಾರಿಗಳು ಗಮನಹರಿಸದಿದ್ದರೆ ಶಿಸ್ತು ಕ್ರಮಕ್ಕಾಗಿ ಸರ್ಕಾರಕ್ಕೆ ಒತ್ತಾಯಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಮನುಷ್ಯರೇ ಅಲ್ಲ ಎಂಬಂತೆ ಪ್ರತಿಕ್ಷಣವೂ ಆತಂಕ, ಅಭದ್ರತೆ, ಶಿಕ್ಷಣ, ಉದ್ಯೋಗ, ವಿವಿಧ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ರಾಜ್ಯದ ಅಲೆಮಾರಿ ಜನಾಂಗದವರನ್ನು ಮುಖ್ಯ ವಾಹಿನಿಗೆ ತರಬೇಕೆಂಬ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಅಲೆಮಾರಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಇದರಸದುಪಯೋಗ ಅರ್ಹರಿಗೆ ಸರಿಯಾಗಿ ತಲುಪಲಿ ಎಂದರು. ಬೋರವೆಲ್ ನೀರು ಸೇವಿಸಿ ಅಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿರುವ ಶಾಲಾ ಮಕ್ಕಳಿಗೆ ಒಂದು ತಿಂಗಳೊಳಗೆ ಸ್ಥಳೀಯ ಪುರಸಭೆ, ಶಿಕ್ಷಣ ಇಲಾಖೆಯಿಂದ ಶುದ್ಧ ಕುಡಿಯುವ ನೀರು, ಸೋರುತ್ತಿರುವ ಮೇಲ್ಚಾವಣೆ ದುರಸ್ತಿಪಡಿಸಿರುವ ಬಗ್ಗೆ ಭಾವಚಿತ್ರ ಸಮೇತ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ವರದಿ ನೀಡಬೇಕು ಎಂದು ನಿರ್ದೇಶನ ನೀಡಿದರು. ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳು ಹಾಗೂ ಅವರ ಪೋಷಕರಿಗೆ ವಿಶೇಷ ಜಾಗೃತಿ ಕಾರ್ಯಕ್ರಮಗಳಿಂದ ಪ್ರತಿಯೊಬ್ಬರಲ್ಲಿಯೂ ಶಿಕ್ಷಣ, ಮೂಲಭೂತ ಸೌಕರ್ಯಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಪೌಷ್ಟಿಕತೆ ನಿವಾರಣೆ, ಮಹಿಳೆಯರ ಓದ್ಯೋಗಿಕರಣ, ವೈಯಕ್ತಿಕ ಶುಚಿತ್ವದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಬೇಕು. ಸರ್ಕಾರಿ ಜಮೀನುಗಳಿದ್ದರೆ ತಕ್ಷಣವೇ ಅಲೇಮಾರಿ ಜನಾಂಗದವರಿಗೆ ನಿವೇಶನಗಳ ಹಂಚಿಕೆ ಮಾಡಬೇಕು. ಜಮೀನು ಇಲ್ಲದಿದ್ದರೆ ಖಾಸಗಿಯವರ ಜಮೀನು ಖರೀದಿಸಿ ಸರ್ವರಿಗೂ ಸೂರು ಕಲ್ಪಿಸಿಕೊಡುವುದರ ಜತೆಗೆ ಅಗತ್ಯ ದಾಖಲೆಗಳನ್ನು ನೀಡಿದರೆ ಕಂದಾಯ ಇಲಾಖೆಯಿಂದ ಜಾತಿ ಪ್ರಮಾಣ ಪತ್ರ ವಿತರಿಸಲು ಮುಂದಾಗಬೇಕು ಎಂದು ತಿಳಿಸಿದರು. ಶಿಕ್ಷಣ ಇಲಾಖೆಯಿಂದ ಅಲೇಮಾರಿ ಜನಾಂಗದ ಮಕ್ಕಳು ಮತ್ತು ಅವರ ಪೋಷಕರಿಗೆ ರಾತ್ರಿ ಶಾಲೆ ಪ್ರಾರಂಭಿಸಿ ಶಿಕ್ಷಣದ ಮಹತ್ವ ತಿಳಿಸಿಕೊಡುವುದರ ಜತೆಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟು ರಾಜ್ಯದ ಎಲ್ಲ ಜಿಲ್ಲೆಗಳಿಗೆ ನರಗುಂದ ಮಾದರಿಯಾಗುವಂತೆ ಕಾರ್ಯ ನಿರ್ವಹಿಸಬೇಕೆಂದು ತಹಸೀಲ್ದಾರ ಶ್ರೀಶೈಲ ತಳವಾರ, ಪುರಸಭೆ ಮುಖ್ಯಾಧಿಕಾರಿ ಪಿ.ಕೆ.ಗುಡದಾರಿ, ಸಿಡಿಪಿಒ ಕಮಲಾ ಹುಲಕೋಟಿ, ಬಿಇಒ ಡಾ.ಗುರುನಾಥ ಹೂಗಾರ ಅವರಿಗೆ ಸೂಚಿಸಿದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ, ತಾಲ್ಲೂಕ ಅಧಿಕಾರಿ ಬಿ.ಎಂ.ಬಡಿಗೇರ, ಆನಂದ, ಬಸವರಾಜ ಭೀಮಣ್ಣವರ, ಸಿಪಿಐ ಮಂಜುನಾಥ ನಡುವಿನಮನಿ, ದುರ್ಗೇಶ ವಿಭೂತಿ, ಅನೀಲ ಭೋವಿ, ಎಸ್.ಆರ್. ರಾಯನಗೌಡ್ರ, ಎಚ್.ಎಂ. ಖುದಾವಂದ, ಎಸ್.ಎನ್.ಹರನಟ್ಟಿ, ಅರಣ್ಯ ಇಲಾಖೆ ಅಧಿಕಾರಿ ಡಿ.ಬಿ.ಪಠಾಣ, ಕೆ.ಎಸ್.ಹಾದಿಮನಿ, ಎಸ್.ಎಲ್.ಪಾಟೀಲ, ಚಂದ್ರು ಮಾದರ, ಮಲ್ಲಪ್ಪ ಅಬ್ಬಿಗೇರಿ, ದೇವಪ್ಪ ಕಟ್ಟಿಮನಿ ಇದ್ದರು.