ಚೆನ್ನೈ, ಜೂನ್ 19,ಕೊರೊನಾವೈರಸ್ ಹರಡುವಿಕೆ ತಡೆಯಲು ಚೆನ್ನೈ ಮತ್ತು ನೆರೆಯ ಮೂರು ಜಿಲ್ಲೆಗಳಲ್ಲಿ ಇಂದಿನಿಂದ 12 ದಿನಗಳ ಸಂಪೂರ್ಣ ಲಾಕ್‌ಡೌನ್ ಆರಂಭವಾಗಿದ್ದು, ನಗರದ ರಸ್ತೆಗಳು ಇಂದು ಬಿಕೋ ಎನ್ನುತ್ತಿದ್ದವು. ಸೋಂಕು ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿರುವ ಚೆನ್ನೈ ನಗರ ಹಾಗೂ ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್‌ಪೇಟೆ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳೊಂದಿಗೆ ಲಾಕ್‍ಡೌನ್ ಆರಂಭವಾಗಿದೆ. ಲಾಕ್‍ಡೌನ್ ಜೂನ್ 30 ರ ಮಧ್ಯರಾತ್ರಿಯವರೆಗೆ ಜಾರಿಯಲ್ಲಿರುತ್ತದೆ.ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ 12 ದಿನಗಳ ಲಾಕ್‌ಡೌನ್ ಘೋಷಿಸಿದ ನಂತರಸಾವಿರಾರು ಜನರು ಗಂಟು-ಮೂಟೆ ಕಟ್ಟಿ ಮನೆಗಳನ್ನು ಖಾಲಿ ಮಾಡಿ ತಮ್ಮ ಸ್ವಂತ ಊರುಗಳಿಗೆ ತೆರಳಿದ್ದಾರೆ.
ಅಂತರ-ರಾಜ್ಯ ಬಸ್ ಸೇವೆಗಳು, ಉಪನಗರ ರೈಲುಗಳು ಮತ್ತು ಚೆನ್ನೈ ಮೆಟ್ರೋ ಸೇವೆಗಳು ಮಾರ್ಚ್ 25 ರಿಂದಲೂ ಸ್ಥಗಿತಗೊಂಡಿವೆ. ಹೊರವಲಯದಲ್ಲಿರುವ ಟೋಲ್ ಪ್ಲಾಜಾಗಳಲ್ಲಿ ನಿನ್ನೆ ಭಾರೀ ವಾಹನ ದಟ್ಟಣೆ ಉಂಟಾಗಿತ್ತು. ಇದರಿಂದ ಶುಲ್ಕ ಸಂಗ್ರಹವನ್ನು ಸರ್ಕಾರ ಕೈಬಿಟ್ಟಿತ್ತು. ಇಂದು ಟೋಲ್ ಪ್ಲಾಜಾಗಳು ಬಿಕೋ ಎನ್ನುತ್ತಿದ್ದವು. ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ ಅನೇಕರು ವಿಮಾನಗಳ ಮೂಲಕ ನಗರವನ್ನು ತೊರೆದಿದ್ದಾರೆ. ತಜ್ಞ ವೈದ್ಯಕೀಯ ಸಮಿತಿಯೊಂದಿಗೆ ಚರ್ಚಿಸಿ ಜೂನ್ 15 ರಂದು ನಡೆದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಮುಖ್ಯಮಂತ್ರಿ ಪಳನಿಸ್ವಾಮಿ ಲಾಕ್‍ಡೌನ್ ಬಿಗಿಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದರು. ಜೂನ್ 21 ಮತ್ತು 28 ರ ಭಾನುವಾರಗಳಂದು ಯಾವುದೇ ವಿನಾಯಿತಿಗಳಿಲ್ಲದೆ ಲಾಕ್‍ಡೌನ್ ಸಂಪೂರ್ಣವಾಗಿರುತ್ತದೆ ಎಂದು ಮುಖ್ಯಮಂತ್ರಿ ಪ್ರಕಟಿಸಿದ್ದಾರೆ. ಗ್ರೇಟರ್ ಚೆನ್ನೈ ಪೊಲೀಸ್ ವ್ಯಾಪ್ತಿಗೆ ಬರುವ ಎಲ್ಲಾ ಪ್ರದೇಶಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಈಗಾಗಲೇ ಜಾರಿಯಲ್ಲಿದೆ. ಈ ಪ್ರದೇಶಗಳು ಕೊವಿಡ್-19 ಹಾಟ್‌ಸ್ಪಾಟ್ ಗಳಾಗಿ ಹೊರಹೊಮ್ಮಿವೆ. ರಾಜ್ಯದ ಒಟ್ಟು 52,000 ಪ್ರಕರಣಗಳ ಪೈಕಿ ಈ ಪ್ರದೇಶಗಳಲ್ಲೇ 37,000 ಪ್ರಕರಣಗಳು ವರದಿಯಾಗಿವೆನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಖ್ಯ ಕಾರ್ಯದರ್ಶಿ ಕೆ ಷಣ್ಮುಗಂ ಅವರು ನಾಲ್ಕು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ನಗರದಲ್ಲಿ 18,000 ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು
ಚೆನ್ನೈ ನಗರ ಪೊಲೀಸ್ ಆಯುಕ್ತ ಎ ಕೆ ವಿಶ್ವನಾಥನ್ ತಿಳಿಸಿದ್ದಾರೆ.
ಕಂಟೈನ್‍ಮೆಂಟ್ ವಲಯಗಳನ್ನು ಹೊರತು ಪಡಿಸಿ ಉಳಿದ ಪ್ರದೇಶಗಳಲ್ಲಿ ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಅಂಗಡಿಗಳಲ್ಲಿ ಅಗತ್ಯವಸ್ತುಗಳನ್ನು ಖರೀದಿಸಲು ಅನುಮತಿಸಲಾಗಿದೆ.