ಹಾರೂಗೇರಿಯಲ್ಲಿ ಶ್ರೀ ವಿಠ್ಠಲ-ರುಕ್ಮಿಣಿಯ ಪಲ್ಲಕ್ಕಿ ಉತ್ಸವ

Sri Vitthal-Rukmini palanquin festival in Harugeri

ಹಾರೂಗೇರಿ 27: ಪ್ರತಿಯೊಬ್ಬ ಮನುಷ್ಯ ಭಕ್ತಿಯಿಂದ ನಡೆದುಕೊಂಡರೆ ಇಡೀ ಸಮಾಜವೇ ಉದ್ಧಾರವಾಗುತ್ತದೆ. ಮಾತು, ನಡೆ, ನುಡಿ, ಚಿಂತನೆಗಳು ಪರಿಶುದ್ಧವಾಗಿರಬೇಕು. ಆಗ ಅಂತರಾತ್ಮಕ್ಕೆ ಶಾಂತಿ, ನೆಮ್ಮದಿ, ಸಂತೋಷ ಪ್ರಾಪ್ತಿಯಾಗುತ್ತದೆ ಎಂದು ವಡಗೋಲ ವ್ಯಾಸ ಪೀಠದ ಸಂಚಾಲಕ ವಿಕ್ರಮ ಸಿಂಗಾಡಿ ಹೇಳಿದರು.   

ಪಟ್ಟಣದ ಶ್ರೀ ವಿಠ್ಠಲ ದೇವಸ್ಥಾನದಲ್ಲಿ ಏಳು ದಿನಗಳವರೆಗೆ ನಡೆಯುತ್ತಿರುವ 55ನೇ ಸಪ್ತಾಹ ಮತ್ತು ಶ್ರೀ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹದ ಕೊನೆಯ ದಿನ ಗುರುವಾರ ವಿಠ್ಠಲ-ರುಕ್ಷ್ಮಿಣಿಯ ಪಲ್ಲಕ್ಕಿ ಉತ್ಸವ ಮತ್ತು ದಿಂಡಿಯ ಪಾದಯಾತ್ರೆಯಲ್ಲಿ ಅವರು ಆಶೀರ್ವಚನ ನೀಡಿದರು.  

 ಬೆಳಿಗ್ಗೆ ವಿಠ್ಠಲ-ರುಕ್ಷ್ಮಿಣಿಯ ಪಲ್ಲಕ್ಕಿ ಉತ್ಸವ ಹಾಗೂ ದಿಂಡಿಯು ಪಟ್ಟಣದ ಪ್ರಮುಖ ನಗರ ಹಾಗೂ ದೇವಸ್ಥಾನಗಳ ಪ್ರದಕ್ಷಿಣೆ ನಡೆಯಿತು. ಸಂತ-ಶರಣೆಯರಿಗೆ ವಸ್ತ್ರದಾನ ಮಾಡಲಾಯಿತು. ದೇವಸ್ಥಾನದ ವತಿಯಿಂದ ಗಣ್ಯರನ್ನು ಸತ್ಕರಿಸಲಾಯಿತು. ನಂತರ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.   

ಏಳು ದಿನಗಳವರೆಗೆ ಪ್ರತಿದಿನ ಲೋಕಕಲ್ಯಾಣಕ್ಕಾಗಿ ಪಾರಾಯಣ, ಸಾಮೂಹಿಕ ಕಾಕಡಾರತಿ ಮತ್ತು ಭೂಪಾಳಿ, ಶ್ರೀ ಏಕನಾಥ ಷಷ್ಠಿ, ಫೋತಿ ಷ್ಠಾಪನೆ ಹಾಗೂ ಸಪ್ತಾಹಕ್ಕೆ ಆಗಮಿಸಿದ ಮಹಾರಾಜರು ಪ್ರತಿದಿನ ಶ್ರೀ ಜ್ಞಾನೇಶ್ವರಿ ಪಾರಾಯಣ, ಹರಿಪಾಠಣೆ, ಕೀರ್ತನೆ ಹೇಳಿದರು. ನಾನಾ ಗ್ರಾಮಗಳಿಂದ ಆಗಮಿಸಿದ ಭಕ್ತರಿಂದ ಭಗವದ್ಗೀತೆ ಪಾರಾಯಣ, ಗೀತೆಯ ಗ್ರಂಥ ಪಠಣೆ ಮಾಡಿದರು. 

ದೇವಸ್ಥಾನದ ಅಧ್ಯಕ್ಷ ಮಾರುತಿ ಧರ್ಮಟ್ಟಿ, ಶಿವಗೊಂಡ ಧರ್ಮಟ್ಟಿ, ಸಂತಶ್ರೀ ಪಾಂಡುರಂಗ ಧರ್ಮಟ್ಟಿ, ಗೋಪಾಲ ಧರ್ಮಟ್ಟಿ, ಪ್ರಧಾನಿ ಧರ್ಮಟ್ಟಿ, ಅನೀಲ ಚವ್ಹಾನ, ಜೋತೆಪ್ಪಾ ಉಮರಾಣಿ, ಗಜಪ್ಪ ಗಸ್ತಿ, ಸದಾಶಿವ ಧರ್ಮಟ್ಟಿ, ಬಿ.ಬಿ.ಮೋಕಾಶಿ, ಪ್ರಲ್ಹಾದ ಅರಕೇರಿ, ಮನ್ವಿತ್ ಅರಕೇರಿ, ಮಾರುತಿ ದಳವಾಯಿ, ಮಹಾದೇವ ಗೌಡರ, ಬಾಬು ಕೆಳಗಡೆ, ಕುಮಾರ ಗುರವ ಪೂಜಾರಿ, ಮನ್ವಿತ ಅರಕೇರಿ, ಜ್ಞಾನೇಶ್ವರ ಧರ್ಮಟ್ಟಿ, ಅನೀಲ ಚವ್ಹಾನ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.