ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಭಾರತಕ್ಕೆ ಭೇಟಿ: ಪ್ರಧಾನಿ ಮೋದಿಯೊಂದಿಗೆ ಮಾತುಕತೆ

Sri Lankan President Anura Kumar Dissanayake Visits India: Talks with PM Modi

ನವದೆಹಲಿ 16: ಭಾರತಕ್ಕೆ ಭೇಟಿ ನೀಡಿರುವ ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಅವರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಮಾತುಕತೆ ನಡೆಸಿದರು.

ರಕ್ಷಣೆ, ವ್ಯಾಪಾರ ಹಾಗೂ ಹೂಡಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ-ಶ್ರೀಲಂಕಾ ನಡುವೆ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಉಭಯ ನಾಯಕರು ಚರ್ಚಿಸಿದರು.

ಭಾರತ ಯಾವಾಗಲೂ ಶ್ರೀಲಂಕಾಕ್ಕೆ ಸಹಾಯ ಮಾಡಿದೆ ಮತ್ತು ಭಾರತದ ವಿದೇಶಾಂಗ ನೀತಿಯಲ್ಲಿ ದ್ವೀಪ ರಾಷ್ಟ್ರವು ಬಹಳ ಮಹತ್ವದ ಸ್ಥಾನವನ್ನು ಹೊಂದಿದೆ ಎಂದು ಡಿಸಾನಾಯಕೆ ಹೇಳಿದರು.ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಲಂಕಾ ಅಧ್ಯಕ್ಷ ಡಿಸಾನಾಯಕೆ ಅವರು, “ಭಾರತದ ಹಿತಾಸಕ್ತಿಗೆ ಧಕ್ಕೆಯಾಗುವ ರೀತಿಯಲ್ಲಿ ನಮ್ಮ ಭೂಮಿಯನ್ನು ಯಾವುದೇ ರೀತಿಯಲ್ಲಿ ಬಳಸಲು ನಾವು ಬಿಡುವುದಿಲ್ಲ ಎಂಬ ಭರವಸೆಯನ್ನು ನಾನು ಭಾರತದ ಪ್ರಧಾನ ಮಂತ್ರಿಯವರಿಗೆ ನೀಡಿದ್ದೇನೆ. ಭಾರತಕ್ಕೆ ನಮ್ಮ ಬೆಂಬಲವನ್ನು ಮತ್ತೊಮ್ಮೆ ಖಚಿತ ಪಡಿಸುತ್ತೇವೆ” ಎಂದಿದ್ದಾರೆ.

ದಿಸ್ಸನಾಯಕೆ ಅವರು ಭಾನುವಾರ ದೆಹಲಿಗೆ ಆಗಮಿಸಿದ್ದು, ರಾಷ್ಟ್ರಪತಿ ಭವನದಲ್ಲಿ ವಿಧ್ಯುಕ್ತ ಸ್ವಾಗತ ನೀಡಲಾಗಿದೆ. ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಅವರ ಮೊದಲ ವಿದೇಶ ಪ್ರವಾಸ ಇದಾಗಿದೆ. 

ನಿನ್ನೆ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ.

ಭಾರತ ಮತ್ತು ಶ್ರೀಲಂಕಾ ನಡುವೆ ಹೂಡಿಕೆ ಮತ್ತು ವಾಣಿಜ್ಯ ಸಂಪರ್ಕಗಳನ್ನು ಉತ್ತೇಜಿಸಲು ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ದಿಸ್ಸನಾಯಕೆ ಅವರು ಪಾಲ್ಗೊಳ್ಳಲಿದ್ದಾರೆ. ಬಳಿಕ ಬೋಧಗಯಾಕ್ಕೆ ಭೇಟಿ ನೀಡಲಿದ್ದಾರೆ.