ಲೋಕದರ್ಶನ ವರದಿ
ಸಿರಗುಪ್ಪ 22: ತುಂಗಭದ್ರಾ ಜಲಾಶಯದಿಂದ ಇತ್ತೀಚೆಗೆ ಹೆಚ್ಚುವರಿ ನೀರು ನದಿಗೆ ಬಿಟ್ಟಿದ್ದರಿಂದ ತಾಲೂಕಿನಲ್ಲಿ 868 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.
ತೋಟಗಾರಿಕೆ, ಕಂದಾಯ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಸಮೀಕ್ಷೆ ಮಾಡಿದ್ದು, ತಾಲೂಕಿನಲ್ಲಿ ನದಿ ನೀರಿನ ಪ್ರವಾಹದಿಂದ 868 ಹೆಕ್ಟೇರ್ನಲ್ಲಿ ಬೆಳೆದಿದ್ದ ಭತ್ತ, ಭತ್ತದ ಸಸಿ, ಸಜ್ಜೆ, ನವಣೆ, ಹತ್ತಿ, ಕಬ್ಬು ಸೇರಿ ಮುಂತಾದ ಬೆಳೆ ಹಾನಿ ಆಗಿ, ಅಪಾರ ನಷ್ಟವಾಗಿದೆ.
ತುಂಗಭದ್ರಾ ಜಲಾಶಯದಿಂದ ಆ.9ರಿಂದ 12ರ ವರೆಗೆ ಹೆಚ್ಚುವರಿ ನೀರು ಹರಿಸಲಾಗಿತ್ತು. ಇದರಿಂದ ನದಿ ದಂಡೆಯಲ್ಲಿರುವ ದೇಶನೂರು, ಸಿರಗುಪ್ಪ, ಇಬ್ರಾಹಿಂಪುರ, ಬಾಗೇವಾಡಿ, ಕೆಸರಕೋಣೆ ಕ್ಯಾಂಪ್, ಶ್ರೀಧರಗಡ್ಡೆ, ಕುಡುದರಹಾಳು, 25-ಹಳೇಕೋಟೆ, ಹೊನ್ನಾರಹಳ್ಳಿ, ಚಿಕ್ಕಬಳ್ಳಾರಿ, ಹಚ್ಚೊಳ್ಳಿ, ಮಾಟೂರು, ಚಳ್ಳೆಕೂಡ್ಲೂರು, ಮಣ್ಣೂರು, ಮಣ್ಣೂರು ಸೂಗೂರು, ನಡವಿ, ನಿಟ್ಟೂರು, ಹೆರಕಲ್ಲು, ಕೆಂಚನಗುಡ್ಡ ಗ್ರಾಮಗಳಿಗೆ ಸೇರಿದ ರೈತರ ಹೊಲಗಳಿಗೆ ನೀರು ನುಗ್ಗಿತ್ತು. 584 ಹೆಕ್ಟೇರ್ನಲ್ಲಿ ನಾಟಿ ಮಾಡಿದ ಭತ್ತ, 205 ಹೆಕ್ಟೇರ್ನಲ್ಲಿ ಬೆಳೆದ ಭತ್ತದ ಸಸಿ, 4 ಹೆಕ್ಟೇರ್ನಲ್ಲಿ ಬೆಳೆದ ಸಜ್ಜೆ, 14 ಹೆಕ್ಟೇರ್ ನವಣೆ, 48 ಹೆಕ್ಟೇರ್ ಹತ್ತಿ, 13 ಹೆಕ್ಟೇರ್ ಕಬ್ಬು ಸೇರಿ ಒಟ್ಟು 868 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆಗಳು ಹಾನಿಗೀಡಾಗಿವೆ.
ಕೆಲ ಕಡೆ ಮರಗಳು ಬಿದ್ದಿವೆ. ನದಿಯ ನೀರಿನ ಸೆಳೆತಕ್ಕೆ ಲವತ್ತಾದ ಮಣ್ಣು ಕೊಚ್ಚಿ ಹೋಗಿದ್ದು, ರೈತರನ್ನು ಕಂಗಾಲು ಮಾಡಿದೆ. ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣವಾಗಿ ಕಿತ್ತುಹೋಗಿ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿವೆ.