ಬೆಂಗಳೂರು, ಮೇ 9,ರೇಷ್ಮೆ ರೀಲರ್ಸ್ ಹಾಗೂ ಟ್ರೇಡರ್ಸ್ ನ ಅಡಮಾನ ಸಾಲ ಮಿತಿಯನ್ನು 2 ಲಕ್ಷ ರೂಪಾಯಿಗೆ ಏರಿಕೆ ಮಾಡುವುದಾಗಿ ರೇಷ್ಮೆ ಖಾತೆ ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ.
ರಿಲರ್ಸ್ ಹಾಗೂ ಟ್ರೇಡರ್ಸ್ ಗಳ ಜೊತೆ ಪ್ರತ್ಯೇಕ ಸಭೆ ನಡೆಸಿದ ಸಚಿವ ಡಾ. ನಾರಾಯಣಗೌಡ, ಸಮಸ್ಯೆಗಳನ್ನು ಆಲಿಸಿ ಪರಿಹಾರವನ್ನೂ ಸೂಚಿಸಿದ್ದಾರೆ. ಕೋವಿಡ್ -19 ನಿಂದ ಸಂಕಷ್ಟಕ್ಕೆ ಸಿಲುಕಿರುವ ರೇಷ್ಮೆ ರೀಲರ್ಸ್ ಹಾಗೂ ಟ್ರೇಡರ್ಸ್ ಗಳಿಗೆ ಇಲಾಖೆ ಈ ಮೂಲಕ ಅನುಕೂಲ ಮಾಡಿಕೊಟ್ಟಿದೆ. ರೇಷ್ಮೆ ಗೆ ಹೆಚ್ಚಿನ ದರ ನಿಗದಿ ಮಾಡುವ ಬಗ್ಗೆಯೂ ಪರಿಶೀಲಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ. ಆ ಬಳಿಕ ಟ್ರೇಡರ್ಸ್ ಗಳ ಜೊತೆ ಸಭೆ ನಡೆಸಿ ಕುಂದುಕೊರತೆ ಆಲಿಸಿದ್ದಾರೆ.
ಹೊರ ರಾಜ್ಯಗಳಿಗೆ ರೇಷ್ಮೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಕೋವಿಡ್ 19 ಬರುವುದಕ್ಕೂ ಮುನ್ನ ಹೆಚ್ಚಿನ ಬೆಲೆಗೆ ರೇಷ್ಮೆ ಖರೀದಿಸಲಾಗಿತ್ತು. ಈಗ ಹೊರ ರಾಜ್ಯಗಳಲ್ಲಿ ವಹಿವಾಟು ನಡೆಸುವುದು ಕಷ್ಟವಾಗಿದೆ. ಅಲ್ಲದೆ ಹೊರ ರಾಜ್ಯಗಳಲ್ಲಿ ನಡೆಸಿದ ವಹಿವಾಟಿನ ಹಣ ಕೂಡ ಬರದೆ ಬಾಕಿಯಾಗಿದೆ. ಇದರಿಂದ ಹೊಸದಾಗಿ ಖರೀದಿಗೂ ಸಮಸ್ಯೆ ಆಗಿದೆ. ಲಾಕ್ ಡೌನ್ ಮುಗಿದ ತಕ್ಷಣ ಚೀನಾ, ವಿಯೆಟ್ನಾಂ ಸೇರಿದಂತೆ ಬೇರೆ ಬೇರೆ ದೇಶಗಳಿಂದ ರೇಷ್ಮೆ ಆಮದಾಗುತ್ತದೆ. ಆಗ ರಾಜ್ಯದ ರೇಷ್ಮೆ ದರ ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರಲ್ಲಿ ಟ್ರೇಡರ್ಸ್ ಮನವಿ ಮಾಡಿದರು.
ಆಂಟಿ ಡಂಪಿಂಗ್ ಚಾರ್ಜ್ ಏರಿಕೆ ಸಂಬಂಧ ತಕ್ಷಣವೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಸಭೆಯಲ್ಲಿ ತಿಳಿಸಿದ ಸಚಿವರು, ರೇಷ್ಮೆ ಆಮದಿಗೂ ಮಿತಿ ಹೇರುವ ಪ್ರಯತ್ನ ಮಾಡಲಾಗುವುದು. ಇನ್ನು ಹೊರ ರಾಜ್ಯಗಳಿಗೆ ರೇಷ್ಮೆ ಸಾಗಿಸಲು ಕಮರ್ಷಿಯಲ್ ವೆಹಿಕಲ್ ಗೆ ಯಾವುದೆ ಸಮಸ್ಯೆ ಇಲ್ಲ. ಜೊತೆ ಅಗತ್ಯವಿದ್ದಲ್ಲಿ ಪಾಸ್ ವ್ಯವಸ್ಥೆ ಕೂಡ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈಗಾಗಲೆ ಕೋರಿಯರ್ ಸರ್ವಿಸ್ ಕೂಡ ಆರಂಭವಾಗಿದೆ. ಟ್ರೇಡರ್ಸ್ ಈ ಎಲ್ಲ ಸೌಲಭ್ಯ ಬಳಸಿಕೊಂಡು ವಹಿವಾಟು ನಡೆಸಬಹುದು. ಯಾವುದೆ ಸಂದರ್ಭದಲ್ಲಿ ವಹಿವಾಟು ನಡೆಸಲು ಸಮಸ್ಯೆ ಎದುರಾದರೆ ತಕ್ಷಣ ಸರ್ಕಾರ ನಿಮ್ಮ ನೆರವಿಗೆ ಬರಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ. ಮಹುಮಹಡಿ ಕಟ್ಟಡದಲ್ಲಿ ನಡೆದ ಸಭೆಯಲ್ಲಿ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ, ಕಮಿಷನರ್ ಶೈಲಜಾ, ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.