ಭೂಪಾಲ್, ಆ 27 ರೈತರ ಕೃಷಿ ಸಾಲವನ್ನು ಮನ್ನಾ ಮಾಡುವ ಭರವಸೆಯನ್ನು ಕಾಂಗ್ರೆಸ್ ಪಕ್ಷ ಮತ್ತ ಅದರ ನಾಯಕರು ಈಡೇರಿಸದೆ ಅನ್ಯಾಯ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆರೋಪಿಸಿದ್ದಾರೆ. ಕಳೆದ ವರ್ಷ ನಡೆದ ರಾಜ್ಯ ವಿಧಾನಸಭಾ ಚುನಾವಣಾ ಸಮಯದಲ್ಲಿ ಮಾಡಿದ್ದ ವಾಗ್ದಾನ ಈಡೇರಿಸಿಲ್ಲ ಅಧಿಕಾರಕ್ಕೆ ಬಂದ ಎರಡು, ಮೂರು ದಿನದಲ್ಲಿ ರೈತರ ಕೃಷಿ ಸಾಲ ಮನ್ನಾ ಮಾಡುವ ಭರವಸೆ ಇನ್ನೂ ಜಾರಿಗೆ ಬಂದಿಲ್ಲ ಅವರು ಅವರ ಪಕ್ಷ ರೈತರಿಗೆ ಮೋಸ ಮಾಡಿದೆ ಎಂದು ಅವರು ಸಾರ್ವಜನಿಕ ಸಭೆಯಲ್ಲಿ ದೂರಿದರು. ಭರವಸೆಯ ಅವಧಿಯೊಳಗೆ ಸಾಲವನ್ನು ಮನ್ನಾ ಮಾಡದಿದ್ದರೆ ಮುಖ್ಯಮಂತ್ರಿಯನ್ನು ಬದಲಾಯಿಸುವುದಾಗಿ ಹೇಳಿದ್ದರು ಆದರೆ ಎಂಟು ತಿಂಗಳುಗಳು ಕಳೆದಿವೆ. ರಾಹುಲ್ ಗಾಂಧಿಯವರ ಲೆಕ್ಕಾಚಾರದ ಪ್ರಕಾರ, ಇಲ್ಲಿಯವರೆಗೆ ಕನಿಷ್ಠ 24 ಮುಖ್ಯಮಂತ್ರಿಗಳನ್ನು ಬದಲಾಯಿಸಬೇಕಾಗಿತ್ತು. ಅವರಿಗೆ ಮುಖ್ಯಮಂತ್ರಿಯನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ, ಬದಲಾಗಿ ರಾಹುಲ್ ಅವರೆ ರಾಜೀನಾಮೆ ನೀಡುವ ಮೂಲಕ ತಮ್ಮನ್ನು ಬದಲಾಯಿಸಿಕೊಂಡರು ಎಂದು ವ್ಯಂಗವಾಡಿದರು. ಹೊಸದಾಗಿ ಅಧಿಕಾರ ಸ್ವೀಕರಿಸಿದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಪುತ್ರ ರಾಹುಲ್ ನೀಡಿದ್ದ ಭರವಸೆಯನ್ನು ಈಡೇರಿಸಲು ಪ್ರಯತ್ನ ಮಾಡಲಿ ಈ ಸಂಬಂಧ ಅವರಿಗೆ ಪತ್ರ ಬರೆಯುವುದಾಗಿ ಚೌಹಾಣ್ ಹೇಳಿದರು.