ಶಿವಯ್ಯ ಹಿರೇಮಠರಿಗೆ ಸಹಸ್ರ ಚಂದ್ರ ದರ್ಶನ

Shivayya Hiremath receives a thousand moon darshan

ವೈದಿಕ ಸಂಪ್ರದಾಯಗಳ ಸಂಸ್ಕೃತಿಯಲ್ಲಿ ಜೀವನದ ಮೈಲಿಗಲ್ಲುಗಳನ್ನು ವಿವಿಧ ಆಚರಣೆಗಳು ಮತ್ತು ಸಮಾರಂಭಗಳಿಂದ ಗುರುತಿಸಲಾಗುತ್ತದೆ. ಅವುಗಳಲ್ಲಿ ಸಹಸ್ರ ಚಂದ್ರ ದರ್ಶನವು ಪ್ರಾಮುಖ್ಯತೆಯನ್ನು ಪಡೆದಿದೆ. ಸಹಸ್ರ ಚಂದ್ರ ದರ್ಶನ ಎಂದರೆ ಸಾವಿರ ಹುಣ್ಣಿಮೆಗಳನ್ನು ನೋಡುವದು ಎಂದರ್ಥ. ಈ ವಿಶಿಷ್ಟ ಆಚರಣೆಯು ಒಬ್ಬ ವ್ಯಕ್ತಿಯು ತಮ್ಮ ಜೀವಿತಾವಧಿಯಲ್ಲಿ 1000 ಹುಣ್ಣಿಮೆಗಳನ್ನು ವೀಕ್ಷಿಸುವ ಸಂದರ್ಭವನ್ನು ಗುರುತಿಸುತ್ತದೆ. ಇದು  81ನೆಯ ವಯಸ್ಸಿನಲ್ಲಿ ಸಾಧಿಸುವ ಸಾಧನೆಯಾಗಿದೆ. ಇದು ದೀರ್ಘಾಯುಷ್ಯ, ಬುದ್ಧಿವಂತಿಕೆ ಮತ್ತು ದೈವಿಕ ಆಶೀರ್ವಾದಗಳಿಗೆ ಸಾಕ್ಷಿಯಾಗಿದೆ. ಸಹಸ್ರ ಚಂದ್ರ ದರ್ಶನವು ದೀರ್ಘಾಯುಷ್ಯದ ಆಚರಣೆಯಾಗಿದ್ದು, ಚಂದ್ರನ ಮಹತ್ವವನ್ನು ಒತ್ತಿ ಹೇಳುತ್ತದೆ. ಇದು ಶುದ್ಧತೆ, ಬುದ್ಧಿವಂತಿಕೆ ಮತ್ತು ದಾಂಪತ್ಯದ ಸಂತೋಷದಾಯಕ ವಾತಾವರಣವನ್ನು ಪ್ರತಿಬಿಂಬಿಸುತ್ತದೆ. 

ತಮ್ಮ ಜೀವಿತಾವಧಿಯಲ್ಲಿ ಸಾವಿರ ಬಾರಿ ಪೂರ್ಣ ಚಂದಿರನನ್ನು ಕಾಣುವ ಭಾಗ್ಯ ಪಡೆದ ದಂಪತಿಗಳಿಗೆ ಅಂದರೆ 80 ವರ್ಷ ಪೂರೈಸಿದ ಹಿರಿಯರಿಗೆ ಸಾಮಾನ್ಯವಾಗಿ ಅವರ ಮಕ್ಕಳು ಸಹಸ್ರ ಚಂದ್ರದರ್ಶನ ಶಾಂತಿ’ ಯನ್ನು ಮಾಡಿಸಿ ಅವರನ್ನು ಗೌರವಿಸುವದರೊಂದಿಗೆ, ಅವರು ಶತಾಯುಷಿಗಳಾಗಿ ಬದುಕಿ ನಮ್ಮ ಬದುಕಿಗೆ ದಾರೀದೀಪವಾಗಲಿ ಎಂದು ಆಶಿಸುವ ಕಾರ್ಯಕ್ರಮವಿದು. ಶಿವಯ್ಯ ಹಿರೇಮಠ ಅವರು ತಮ್ಮ ಧರ್ಮಪತ್ನಿ ಶಾಂತಾ ಅವರೊಂದಿಗೆ ನೆರವೇರಿಸಿಕೊಂಡ ಈ ಶಾಂತಿ ಸಮಾರಂಭ ಮಹಿಳೆಯರಲ್ಲಿ ಒಂದು ರೀತಿಯ ಭಾವನಾತ್ಮಕವಾದ ಅನುಭೂತಿಯನ್ನು ಸೃಷ್ಟಿಸಿತು. ಹಾಗಾಗಿ ಈ ಸಮಾರಂಭದಲ್ಲಿ ಅವರ ದೊಡ್ಡ ಬಳಗವೇ ಸೇರಿ, ಸಹಸ್ರ ಚಂದ್ರದರ್ಶನ ಶಾಂತಿ ಸಮಾರಂಭಕ್ಕೆ ನೂತನ ಕಳೆಯನ್ನು ತಂದಿದ್ದರು. ಒಟ್ಟು 81 ದೀಪಗಳನ್ನು ಗೋಧಿ ಹಿಟ್ಟಿನಿಂದ ತಯಾರಿಸಿ ಒಂದು ತಟ್ಟೆಯಲ್ಲಿ ಇರಿಸಿ ಬೆಳಗಿಸಿದರು. ನಂತರ ಮಕ್ಕಳು, ಸೊಸೆಯಂದಿರು ಅವರಿಗೆ ಪುಷ್ಪಾಭಿಷೇಕ ಮಾಡಿದರು. ಹೊಸ ವಸ್ತ್ರವನ್ನುಟ್ಟು ವಿಶೇಷ ಕಳೆ ಸೂಸುತ್ತಿದ್ದ ಹಿರಿಯ ದಂಪತಿಗಳಿಗೆ ಶಾಲನ್ನು ಹೊದಿಸಿ, ಫಲ ತಾಂಬೂಲವನ್ನು ನೀಡಿ ಗೌರವಿಸಿ ಸತ್ಕರಿಸಿದರು. ಕಾರ್ಯಕ್ರಮಕ್ಕೆ ಬಂದವರೆಲ್ಲ ಹಿರಿಯ ದಂಪತಿಗಳಿಗೆ ನಮಸ್ಕರಿಸಿ ಧನ್ಯರಾದರು. ಅವರ ವಾಕಿಂಗ್ ಮಿತ್ರರೆಲ್ಲ ಸೇರಿ ಗೌರವಿಸಿ, ಸಂತಸವನ್ನು ಹಂಚಿಕೊಂಡರು. ಆಗಮಿಸಿದವರೆಲ್ಲರಿಗೂ ಭೂರಿ ಭೋಜನದ ವ್ಯವಸ್ಥೆಯೂ ಇತ್ತು. ನಮ್ಮ ಪೋಷಕರು ತಮ್ಮ ಮಕ್ಕಳ ಕನಸುಗಳನ್ನು ನನಸಾಗಿಸಲು ಕಷ್ಟಗಳನ್ನು ಸಹಿಸಿಕೊಳ್ಳುತ್ತಾರೆ. ಈ ಸಮಾರಂಭವು ಅವರ ಮೇಲಿನ ನಮ್ಮ ಪ್ರೀತಿ ಮತ್ತು ಕೃತಜ್ಞತೆಯನ್ನು ತೋರಿಸಲು ಸೂಕ್ತವಾಗಿದೆ. ಪಾಲಕರು ಬಯಸಿದ ರೀತಿಯಲ್ಲಿ ಈ ಸಮಾರಂಭವನ್ನು ಮಾಡಿದ್ದಕ್ಕಾಗಿ ನಾವು ಧನ್ಯರು ಎಂದು ಅವರ ಮಗ ರಾಜಶೇಖರಯ್ಯ ಸಂತಸ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಒಂದು ಅಪೂರ್ವವಾದ ಕಾರ್ಯಕ್ರಮವನ್ನು ವೀಕ್ಷಿಸಲು ಅವಕಾಶ ಸಿಕ್ಕಿದ್ದು ನಮಗೆ ಸಂತಸ ನೀಡಿತು. 

ಶಿವಯ್ಯ ಹಿರೇಮಠ ಅವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುಡಗುಂಚಿಯಲ್ಲಿ 1944ರ ಡಿಸೆಂಬರ 12ರಂದು ಜನಿಸಿದರು. ಅವರ ತಂದೆ ಗುರುಸಿದ್ಧಯ್ಯಾ, ತಾಯಿ ಗೌರಮ್ಮ, ಸುಸಂಸ್ಕೃತ ವಾತಾವರಣದಲ್ಲಿ ಬೆಳೆದ ಶಿವಯ್ಯನವರು ಕುಡುಗಂಚಿಯಲ್ಲಿಯೇ 4ನೆಯ ತರಗತಿವರೆಗೆ ಓದಿದರು. ನಂತರ ಕೊಪ್ಪಳದ ಗವಿಮಠದಲ್ಲಿ ಇದ್ದುಕೊಂಡು, ಶ್ರೀ ಗವಿಸಿದ್ಧೇಶ್ವರ ಶಾಲೆಯಲ್ಲಿ ಮೆಟ್ರಿಕ್‌ನ್ನು ಪೂರೈಸಿದರು. ಅವರು ಸರ್ಕಾರಿ ಶಿಕ್ಷಣ ಕಾಲೇಜಿನಿಂದ ಟಿಸಿಎಚ್‌ನ್ನು ತೇರ್ಗಡೆಗೊಳಿಸಿದರು. ಶಿಕ್ಷಕಾರಗಬೇಕೆಂಬ ಬಲವಾದ ಇಚ್ಛೆ ಶಿವಯ್ಯನವರಿಗೆ ಇತ್ತು. ಆದರೆ ಸಾಧ್ಯವಾಗಲಿಲ್ಲ. ಹೀಗಾಗಿ ಮುನಿರಾಬಾದ ಡ್ಯಾಮ್‌ನಲ್ಲಿ ಆರು ತಿಂಗಳವರೆಗೆ ತೋಟಗಾರಿಕೆ ಇಲಾಖೆಯಲ್ಲಿ ತರಬೇತಿ ಪಡೆದರು. 1966ರಲ್ಲಿ ಮುನಿರಾಬಾದ್ ಡ್ಯಾಮ್‌ನಲ್ಲಿಯೇ ತೋಟಗಾರಿಕಾ ಸಹಾಯಕರಾಗಿ ನೇಮಕಗೊಂಡರು. ಅಲ್ಲಿ ಕೆಲವು ವರ್ಷ ಸೇವೆ ಸಲ್ಲಿಸಿದ ಶಿವಯ್ಯನವರು 1971ರಲ್ಲಿ ಸವದತ್ತಿಯ ಮಲಪ್ರಭಾ ಆಣೆಕಟ್ಟಿನಲ್ಲಿ ನಿಯುಕ್ತಿಗೊಂಡರು. ಅವರ ಸೇವೆ ಅನುಪಮವಾದುದು. ಅವರು 2002ರವರೆಗೆ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿದರು. ಶಿವಯ್ಯನವರು 36 ವರ್ಷಗಳವರೆಗೆ ತಮ್ಮ ವೃತ್ತಿಯ ಮೂಲಕ ಜನಾನುರಾಗಿಯಾಗಿ, ಇಲಾಖೆಯಿಂದ ಮೆಚ್ಚುಗೆ ಗಳಿಸಿದರು. 

ಶಿವಯ್ಯ ಹಿರೇಮಠ ಅವರು ರೋಣ ತಾಲೂಕಿನ ಸವಡಿ ಗ್ರಾಮದ ಶಾಂತಾ ಅವರನ್ನು 1972ರಲ್ಲಿ ವಿವಾಹವಾದರು. ಅವರಿಗೆ ಐವರು ಮಕ್ಕಳು, ಅನ್ನಪೂರ್ಣ, ಉಮಾ, ವಿಜಯಲಕ್ಷ್ಮೀ, ಗೀತಾ ಹಾಗೂ ರಾಜಶೇಖರಯ್ಯ. ರಾಜಶೇಖರಯ್ಯ ಸಾಪ್ಟವೇರ್ ಎಂಜನೀಯರಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಬದುಕಿನ ಸಾಧನೆಗೆ ಮತ್ತು ಸಾರ್ಥಕ ಸೇವೆಗೆ ಅಭಿನಂದನೆ ಸಲ್ಲಿಸಲು ಅವರ ಮಕ್ಕಳು, ಬಂಧು ಬಳಗ ಹಾಗೂ ಮಿತ್ರರು ಇತ್ತೀಚಿಗೆ ‘ಸಹಸ್ರ ಚಂದ್ರ ದರ್ಶನ ಶಾಂತಿ’ ಸಂಭ್ರಮದ ಕಾರ್ಯಕ್ರಮವನ್ನು ಏರಿ​‍್ಡಸಿತು. ಈ ಅಪೂರ್ವವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ಒದಗಿ ಬಂದಿತು. ಇದು ನನ್ನಂತೆ ಅನೇಕರಿಗೆ ಬಹು ಅಪರೂಪದ ಕಾರ್ಯಕ್ರಮವೆನಿಸಿತು.  

ಈ ಹಿರಿಯ ದಂಪತಿಗಳಿಬ್ಬರೂ ತಮಗೆ ತಿಳಿದಿದ್ದನ್ನು ಹಲವರಿಗೆ ತಿಳಿಸಿಕೊಡುವ ದೊಡ್ಡತನ ಪಡೆದವರು. ಸದ್ಗುಣಶೀಲರು. ಸರಳ ನಡೆ ನುಡಿಯ ಸಜ್ಜನರು. ಅನ್ಯೋನ್ಯವಾಗಿ ಬಾಳಿ ಆದರ್ಶ ದಂಪತಿಗಳು ಎನಿಸಿಕೊಂಡವರು. ಬದುಕಿನಲ್ಲಿ ಬಂದ ಕಷ್ಟಗಳಿಗೆ ಹೆದರದೆ ಸಾಧಿಸಿ ತೋರಿಸಿದ ಮಾರ್ಗದರ್ಶಕರು. ಶಿವಯ್ಯನವರು ಬಡತನದಲ್ಲಿಯೇ ತಮ್ಮ ಬಾಲ್ಯವನ್ನು ಕಳೆದವರು. ದೇವರಲ್ಲಿ ಅಪಾರವಾದ ನಂಬಿಕೆಯಿಟ್ಟವರು. ಧಾರವಾಡ ಮುರುಘಾಮಠದ ಮಹಾಂತಪ್ಪ ಅಪ್ಪನವರ, ತಪೋವನದ ಕುಮಾರಸ್ವಾಮಿಗಳು ಹೀಗೆ ನಾಡಿನ ಶ್ರೇಷ್ಠ ಸ್ವಾಮಿಗಳನ್ನು ಆಧ್ಯಾತ್ಮಿಕ ಗುರುಗಳನ್ನಾಗಿ ಸ್ವೀಕರಿಸಿ, ಅಧ್ಯಾತ್ಮದ ಪರಿಸರದಲ್ಲಿಯೇ ಮುನ್ನಡೆದಿದ್ದಾರೆ. ಈಗಲೂ ನಿತ್ಯವು ಬೆಳಗಿನ ಸಮಯದಲ್ಲಿ ಧ್ಯಾನ, ಯೋಗಾಸನ, ಮುದ್ರಾ, ರೇಖಿಗಳಲ್ಲಿ ತೊಡಗಿಕೊಂಡಿರುತ್ತಾರೆ. ಧಾರವಾಡದ ಕೆಲಗೇರಿ ಕೆರೆಯ ಸಮೀಪದ ಲೇಕ್ ವ್ಹೂ ಸಿಟಿಯಲ್ಲಿ ನಿತ್ಯವೂ ಸಂಜೆ ವಾಕಿಂಗ್‌ನಲ್ಲಿ ಅವರನ್ನು ಕಾಣಬಹುದು. 

ಶಿವಯ್ಯ ಹಿರೇಮಠದ ಅವರದು ಸದಾ ಉತ್ಸಾಹ ಹಾಗೂ ಕ್ರಿಯಾಶೀಲ ವ್ಯಕ್ತಿತ್ವ. ಅವರು ಸರಳತೆ, ಸಜ್ಜನಿಕೆಯನ್ನು ಮೈಗೂಡಿಸಿಕೊಂಡವರು. ತೋಟಗಾರಿಕೆ ಇಲಾಖೆಯ ವೃತ್ತಿಯನ್ನು ತಮ್ಮ ಬದುಕಾಗಿಸಿಕೊಂಡು ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಉತ್ಸಾಹ ಶಾಲಿಯಾಗಿ ಭಾಗವಹಿಸುತ್ತಾ, 80ರ ಇಳಿ ವಯಸ್ಸಿನಲ್ಲಿಯೂ ಅವರು ತಮ್ಮ ಜೀವನೋತ್ಸಾಹ ಮೆರೆಯುತ್ತಿದ್ದಾರೆ. ಎಲೆಮರೆಯ ಕಾಯಿಯಂತೆ ಅವರು ತಮ್ಮ ಬದುಕನ್ನು ಸಾರ್ಥಕಪಡಿಸಿಕೊಂಡವರು. ಸಾಮಾನ್ಯವಾಗಿ ವೃದ್ಧಾಪ್ಯವೆಂದರೆ ಶಾಪ ಎನ್ನುವ ಇಂದಿನ ದಿನಗಳಲ್ಲಿ ತಮ್ಮ ಜೀವನದ ಕುರಿತು ಹೆಮ್ಮೆಯಿಂದ ಹೇಳುತ್ತ, ನೋವುಗಳನ್ನು ನುಂಗಿ ಸಂತೋಷದ ಬದುಕುವ ಹಿರೇಮಠರು ತುಂಬಾ ಅಪರೂಪ. ಅಪ್ಪಟ ಪ್ರಾಮಾಣಿಕ, ಸುಸಂಸ್ಕೃತ ಹಾಗೂ ಚಿಂತನಪರ ಬದುಕಿಗೆ ಶಿವಯ್ಯ ಹಿರೇಮಠರು ಒಂದು ಉತ್ತಮ ನಿದರ್ಶನ. ಅವರ ಆದರ್ಶ ಬದುಕು ನಮಗೆಲ್ಲ ಮಾದರಿಯಾಗಲಿ. 

ಸುರೇಶ ಗುದಗನವರ 

ಲೇಖಕರು 

ಧಾರವಾಡ 

9449294694