ಲೋಕದರ್ಶನ ವರದಿ
ಕುಮಟಾ : ಇಲ್ಲಿನ ಯುವ ಬ್ರಿಗೇಡ್ ವತಿಯಿಂದ 7ನೇ ಹಂತದ ಕಣ ಕಣದಲ್ಲಿಯೂ ಶಿವ ಎಂಬ ವಿಶಿಷ್ಠ ಕಾರ್ಯಕ್ರಮವನ್ನು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಈ ಸಂಧರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ಅಣ್ಣಪ್ಪ ನಾಯ್ಕ ಅವರು, ಜನರು ತಮಗೆ ಅವಶ್ಯವಿಲ್ಲದ ಇಲ್ಲವೇ ಹಾಳಾದ ದೇವರ ಪೋಟೋಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಅಂತಹ ದೇವರ ಪೊಟೋಗಳನ್ನು ಸಂಗ್ರಹಿಸಿ ಮಣ್ಣಿನಲ್ಲಿ ಮುಚ್ಚಿ ಅದರ ಮೇಲೆ ಗಿಡ ನೆಡುವ ವಿಶಿಷ್ಠ ಕಾರ್ಯಕ್ರಮ ಇದಾಗಿದೆ. ಕಳೆದ 7 ವರ್ಷಗಳಿಂದ ಯುವ ಬ್ರಿಗೇಡ್ ಕುಮಟಾದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದೆ. ಇಲ್ಲಿರುವ ಅರಳಿಮರದ ಕೆಳಗೆ ಒಂದಷ್ಟು ಪೊಟೋಗಳನ್ನು ತಂದು ಹಾಕಿದ್ದಾರೆ.ನಾವು ಇಂತಹ ಪೊಟೋಗಳನ್ನು ಸಂಗ್ರಹಿಸಿ ಅದರಲ್ಲಿರುವ ಗಾಜು,ಚೌಕಟ್ಟನ್ನು ಬೇರ್ಪಡಿಸಿ ಪೊಟೋವನ್ನು ಮಣ್ಣಿನಲ್ಲಿ ಹಾಕಿ ಅದರ ಮೇಲೆ ಗಿಡವನ್ನು ನೆಡುವ ಕಾರ್ಯವನ್ನು ಮಾಡುತ್ತಿದ್ದೇವೆ.ಜನರು ಕೂಡ ದೇವರ ಪೊಟೋಗಳನ್ನು ಎಲ್ಲೆಂದರಲ್ಲಿ ಎಸೆಯದೇ ಇಂಥಹ ಕಾರ್ಯಕ್ಕೆ ಬಳಸಬೇಕು.ಸಂಗ್ರಹಿಸಿದ ಪೊಟೋಗಳ ಬಗ್ಗೆ ನಮಗೆ ಮಾಹಿತಿ ನೀಡಿದರೆ ಯುವ ಬ್ರಿಗೇಡ್ ಸದಸ್ಯರು ಬಂದು ವಿಲೇವಾರಿ ಮಾಡುವ ಕೆಲಸವನ್ನು ಮಾಡುತ್ತೇವೆ ಎಂದರು.
ಈ ಸಂಧರ್ಭದಲ್ಲಿ ಯುವ ಬ್ರಿಗೇಡ್ ಸದಸ್ಯರಾದ ಕಿರಣ ಕೋನಳ್ಳಿ, ಅಮಿತ ಪಟಗಾರ, ಕಿಶೋರ ಶೆಟ್ಟಿ, ಸತೀಶ ಪಟಗಾರ, ಸಂದೀಪ ಮಡಿವಾಳ ಹಾಗೂ ಮೊದಲಾದವರು ಉಪಸ್ಥಿತರಿದ್ದರು.