ಬೆಂಗಳೂರು, ಮೇ 9,ಅಕ್ಕಿ ಬದಲು ಕಬ್ಬಿನಿಂದ ಸ್ಯಾನಿಟೈಜರ್ ತಯಾರಿಸಲು ಪ್ರಧಾನ ಮಂತ್ರಿಗಳು ಹಾಗು ಮುಖ್ಯಮಂತ್ರಿಗಳಿಗೆ ಆಗ್ರಹಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಕಾಂಗ್ರೆಸ್ ಕಿಸಾನ್ ಸೆಲ್ ಘಟಕ ಅಧ್ಯಕ್ಷ ಸಚಿನ್ ಮೀಗಾ ಪತ್ರ ಬರೆದಿದ್ದಾರೆ.ಬಡವರಿಗೆ ನೀಡಬೇಕಾದ ಅವಶ್ಯಕವಾಗಿ ದಾಸ್ತಾನು ಮಾಡಿರುವ ಅಕ್ಕಿಯಿಂದ ಸ್ಯಾನಿಟೈಜರ್ ತಯಾರಿಸಲು ಮುಂದಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹೆಜ್ಜೆ ಅಸಂಬದ್ದ, ಅವೈಜ್ಞಾನಿಕ ಹಾಗೂ ದೂರದೃಷ್ಟಿತ್ವಯಿಲ್ಲದ ಕಾರ್ಯವಾಗಿದೆ.ಕರ್ನಾಟಕ ಕಿಸಾನ್ ಕಾಂಗ್ರೆಸ್ ಆಧ್ಯಯನ ತಂಡ ಮಂಡ್ಯ,ಬೆಳಗಾವಿ ಹಾಗು ಬಾಗಲಕೋಟೆ ಜಿಲ್ಲೆಗಳಿಗೆ ಭೇಟಿ ಮಾಡಿದ ಸಂದರ್ಭದಲ್ಲಿ, ಅಕ್ಕಿಯ ಬದಲು ಕಬ್ಬಿನಿಂದ ಸ್ಯಾನಿಟೈಜರ್ ತಯಾರಿಸಬಹುದೆಂಬ ಅಂಶ ಪ್ರಸ್ತಾಪವಾಗಿದೆ. ಈ ಬಗ್ಗೆ ಸಿ.ಎಫ್.ಟಿ.ಆರ್.ಐ (ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ) ಮುಖ್ಯಸ್ಥರನ್ನು ಸಂಪರ್ಕಿಸಿದ್ದು ,ಪೂರಕವಾದ ನಿಲುವು ವ್ಯಕ್ತವಾಗಿದೆ.ಆದ್ದರಿಂದ ಕೆಪಿಸಿಸಿ ಅಧ್ಯಕ್ಷರು ಶೀಘ್ರ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿಯೋ ಅಥವಾ ಪತ್ರ ಮುಖೇನ ಅಕ್ಕಿಯ ಬದಲಿಗೆ ಕಬ್ಬಿನಿಂದ ಸ್ಯಾನಿಟೈಸರ್ ತಯಾರಿಸುವ ಪ್ರಸ್ತಾವನೆಯನ್ನು ಮಂಡಿಸಬೇಕೆಂದು ಸಚಿನ್ ಮೀಗಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಕಬ್ಬಿನಿಂದ ಸ್ಯಾನಿಟೈಸರ್ ತಯಾರಿಸುವುದರಿಂದ ಸಂಕಷ್ಟದ ಈ ಸಮಯದಲ್ಲಿ ರಾಜ್ಯದ ಕಬ್ಬು ಬೆಳೆಗಾರರನ್ನೂ ಉತ್ತೇಜಿಸಿದಂತಾಗುತ್ತದೆ. ಅಲ್ಲದೇ ಕ್ಯಾರೆಟ್, ಆಲೂಗಡ್ಡೆ, ಗೆಣಸು ಇತ್ಯಾದಿಗಳಿಂದಲೂ ಸ್ಯಾನಿಟೈಜರ್ ತಯಾರಿಸಬಹುದು ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಇದರಿಂದ ತರಕಾರಿ ಬೆಳೆಗಳಿಗೆ ಉತ್ತೇಜನ, ಖರೀದಿಗೆ ಹೆಚ್ಚು ಅವಕಾಶ ನೀಡಿದಂತಾಗುತ್ತದೆ ಎಂದು ಸಚಿನ್ ಮೀಗಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.