ದೇಶದ ಆರ್ಥಿಕ ಪ್ರಗತಿಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಮುಖ್ಯ: ಅಮಿತ ಕೋರೆ

ಚಿಕ್ಕೋಡಿ 20: ದೇಶದ ಆರ್ಥಿಕ ಪ್ರಗತಿಗೆ ಸಹಕಾರ ಸಂಸ್ಥೆಗಳ ಪಾತ್ರ ಮುಖ್ಯವಾಗಿದೆ. ಹೀಗಾಗಿ ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ಕೇಂದ್ರ ಸರ್ಕಾರ ಪ್ರತ್ಯೇಕ ಸಹಕಾರ ಇಲಾಖೆ ಪಿಸಿರುವುದು ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ಹೆಚ್ಚು ಉಪಯುಕ್ತವಾಗಿದೆ ಎಂದು ದೆಹಲಿಯ ರಾಷ್ಟ್ರೀಯ ಸಕ್ಕರೆ ಕಾರ್ಖಾನೆಯ ಮಹಾಮಂಡಳದ ನಿರ್ದೇಶಕ ಅಮಿತ ಪ್ರಭಾಕರ ಕೋರೆ ಹೇಳಿದರು. 

ತಾಲೂಕಿನ ಅಂಕಲಿಯ ಡಾ, ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಇದರ 36 ನೆಯ ಸರ್ವಸಾಧರಣ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಡಾ, ಪ್ರಭಾಕರ ಕೋರೆ ಸಹಕಾರಿ ಸಂಸ್ಥೆಯು ಕಳೆದ 36 ವರ್ಷದಿಂದ ರೈತರ ಪರವಾಗಿ ನಿಂತಿದೆ. ರೈತರಿಗೆ ಹೆಚ್ಚು ಸಾಲ ಸೌಲಭ್ಯ ನೀಡಿರುವ ಹೆಗ್ಗಳಿಕಿಗೆ ಈ ಸಂಸ್ಥೆಗಿದೆ ಎಂದರು. 

ಸಂಸ್ಥೆಯು ಪ್ರಸಕ್ತ ವರ್ಷದಲ್ಲಿ 83803 ಸದಸ್ಯರನ್ನು ಹೊಂದಿದೆ. 3.01 ಕೋಟಿ ಶೇರು ಬಂಡವಾಳ ಹೊಂದಿದೆ. 1405.67 ಕೋಟಿ ಠೇವಣಿಗಳು, 967.05 ಸಾಲ ಮತ್ತು ಮುಂಗಡಗಳು, 20256.63 ಕೋಟಿ ವಾರ್ಷಿಕ ವಹಿವಾಟು ನಡೆದಿದೆ. 19.32 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದರು. 

ಸಂಸ್ಥೆಯು ಈಗಾಗಲೇ 55 ಶಾಖೆಗಳನ್ನು ಹೊಂದಿದೆ. ಮುಂಬರುವ ದಿನಗಳಲ್ಲಿ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದಲ್ಲಿ ಶಾಖೆ ಆರಂಭಿಸಲಿದೆ. 31 ಹೊಸ ಶಾಖೆಗಳಿಗೆ ಸರ್ಕಾರಕ್ಕೆ ಪ್ರಾಸ್ತವಣೆ ಸಲ್ಲಿಸಲಾಗಿದೆ ಎಂದರು. ಆನರು ಸಹಕಾರಿ ಸಂಸ್ಥೆಗಳ ಮೇಲೆ ನಂಬಿಕೆ ವಿಶ್ವಾಸ ಇಡಬೇಕು. ಮೇಲಿಂದ ಮೇಲೆ ಸಂಸ್ಥೆಯ ಆರ್ಥಿಕ ಪ್ರಗತಿ ಕುರಿತು ಸದಸ್ಯರು ಅವಲೋಕನ ಮಾಡಿಕೊಳ್ಳಬೇಕು ಎಂದರು. 

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದೇವೇಂದ್ರ ಕರೋಶಿ ವಾರ್ಷಿಕ ವರದಿ ಮಂಡಿಸಿ ಸಹಕಾರಿ ಸಂಸ್ಥೆಯ ಸದಸ್ಯರಿಗೆ ಸಾಮಾನ್ಯ ವಿಮೆ ಜೊತೆಗೆ ಆರೋಗ್ಯ ವಿಮೆ ಸೌಲಭ್ಯ ಒದಗಿಸಲಾಗಿದೆ. ಸಂಸ್ಥೆಯಲ್ಲಿ ಹೊಸ ಹೊಸ ತಂತ್ರಜ್ಞಾನ ಅಳವಡಿಸಿ ಎಲ್ಲಿಯೂ ಲೋಪವಾಗದಂತೆ ಆಡಳಿತ ಮಂಡಳಿ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಸದಸ್ಯರು ಇಟ್ಟಿರುವ ಬಂಗಾರ ಇತರೆ ವಸ್ತುಗಳಿಗೆ ಲಾಕರದಲ್ಲಿ ಸೂಕ್ತ ಭದ್ರತೆ ಒದಗಿಸಲಾಗುತ್ತದೆ ಎಂದರು. 

ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಪಾಟೀಲ, ಉಪಾಧ್ಯಕ್ಷ ಸಿದಗೌಡ ಮಗದುಮ್ಮ, ದಿಗ್ಧದರ್ಶಕರಾದ ಮಲ್ಲಿಕಾರ್ಜುನ ಕೋರೆ, ಅಣ್ಣಾಸಾಹೇಬ ಸಂಕೇಶ್ವರಿ, ಬಸಗೌಡ ಆಸಂಗಿ, ಡಾ,ಸುಕುಮಾರ ಚೌಗಲೆ, ಪಿಂಟು ಹಿರೇಕುರಬರ, ಅನಿತ ಜಾಧವ, ಪ್ರಪುಲ್ ಶೆಟ್ಟಿ, ಬಾಳಪ್ಪ ಉಮರಾಣಿ, ಶ್ರೀಕಾಂತ ಉಮರಾಣಿ ಮುಂತಾದವರು ಇದ್ದರು.