ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರಿಂದ ಪಟ್ಟಣದ ಸಮಸ್ಯೆಗಳ ಸತ್ಯದರ್ಶನ

ಲೋಕದರ್ಶನ ವರದಿ ಫಲಶೃತಿ 

ವಾರ್ಡ್‌ ಭೇಟಿ ವೇಳೆ ಸಾರ್ವಜನಿಕರ ಯಾತನೆ ಕಂಡು ಮರುಗಿದ ಅಧ್ಯಕ್ಷ 

ಹಾರೂಗೇರಿ 19: ಶುಕ್ರವಾರ ಬೆಳಿಗ್ಗೆ ಹಾರೂಗೇರಿ ಪಟ್ಟಣದ ನೈಜ ದರ್ಶನ ಮಾಡಿದ ಪುರಸಭೆ ಅಧ್ಯಕ್ಷ ವಸಂತ ಲಾಳಿ ಹಾಗೂ ಉಪಾಧ್ಯಕ್ಷ ಬಸವರಾಜ ಅರಕೇರಿ. ಹಾರೂಗೇರಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಂದ ವಾರ್ಡ್‌ ಸಮಸ್ಯೆಗಳ ಪ್ರತ್ಯಕ್ಷ ದರ್ಶನ. ಇದು ಲೋಕದರ್ಶನ ವಿಶೇಷ ವರದಿಯ ಫಲಶೃತಿ.  

ಲೋಕದರ್ಶನ ದಿನಪತ್ರಿಕೆಯಲ್ಲಿ ಸೆ. 16ರಂದು ಹಾರೂಗೇರಿ ಪುರಸಭೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಧಿಯಲ್ಲಿ ಬೇಕು ಅಭಿವೃದ್ಧಿಗೆ ಆಧ್ಯತೆ ಎಂಬ ಶಿರ್ಷಿಕೆಯಡಿ ವಿಶೇಷ ವರದಿಯನ್ನು ಪ್ರಸಾರ ಮಾಡಿ, ಜನಪ್ರತಿನಿಧಿ ಹಾಗೂ ಪುರಜನರ ಗಮನ ಸೆಳೆದಿತ್ತು. ವರದಿಯ ಸತ್ಯಾನ್ವೇಷನೆ ಅರಿತ ನೂತನ ಅಧ್ಯಕ್ಷ ವಸಂತ ಲಾಳಿ, ಉಪಾಧ್ಯಕ್ಷ ಬಸವರಾಜ ಅರಕೇರಿ ಅವರು ಸಿಬ್ಬಂದಿಯೊಂದಿಗೆ ಪಟ್ಟಣದ ವಾರ್ಡ ನಂ.8 ಜನತಾ ಪ್ಲಾಟ್‌ಗೆ ಭೇಟಿ ನೀಡಿದಾಗ ಅಲ್ಲಿನ ನಿವಾಸಿಗಳು ಅನುಭವಿಸುತ್ತಿರುವ ಯಾತನೆಯ ಸತ್ಯದರ್ಶನವಾಯಿತು.  

ಜನತಾ ಪ್ಲಾಟ್ ಕಾಲೋನಿಗೆ ಹೊಂದಿಕೊಂಡಿರುವ ವಾರ್ಡ್‌ ನಂ.8 ರಲ್ಲಿ ಹಂದಿಗಳನ್ನು ಸಾಕಾಣಿಕೆ ಮಾಡುತ್ತಿದ್ದು, ಅದರ ದುರ್ಗಂಧದಿಂದ ಅಲ್ಲಿನ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಉಸಿರಾಡಿದರೂ ಕೆಟ್ಟ ವಾಸನೆ. ಊಟ ಮಾಡಲೂ ಆಗದ, ಮನೆ ಬಿಟ್ಟು ಹೊರಬಾರದ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಹಲವಾರು ಬಾರಿ ಪುರಸಭೆಗೆ ಮನವಿ ಮಾಡಿದರೂ ಈ ಬಗ್ಗೆ ಕ್ಯಾರೇ ಎನ್ನುತ್ತಿಲ್ಲ ಎಂದು ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡರು.  

ಹಂದಿ ಸಾಕಾಣಿಕೆ ಮಾಡುತ್ತಿದ್ದವರನ್ನು ಸ್ಥಳಕ್ಕೆ ಕರೆಸಿದ ಅಧ್ಯಕ್ಷ ವಸಂತ ಲಾಳಿ, ಅವರಿಗೆ ಖಡಕ್ಕಾಗಿ ತಾಕೀತು ಮಾಡಿದರು. ಪಟ್ಟಣದ ಮದ್ಯಭಾಗದಲ್ಲಿ, ಜನವಸತಿ ಪ್ರದೇಶದಲ್ಲಿ ಹಂದಿಗಳನ್ನು ಸಾಕುವುದರಿಂದ ಜನ ಬದುಕಲು ಕಷ್ಟವಾಗುತ್ತದೆ. ತಕ್ಷಣವೇ ಅದನ್ನು ತೆರವುಗೊಳಿಸಬೇಕೆಂದು ಸೂಚಿಸಿದರು. ಈಬಗ್ಗೆ ಸಪ್ಟೆಂಬರ್ 27 ಶುಕ್ರವಾರ ನಡೆಯಲಿರುವ ಪುರಸಭೆಯ ಪ್ರಥಮ ಸಭೆಯಲ್ಲಿ ಪ್ರಮುಖ ವಿಷಯವಾಗಿ ಚರ್ಚಿಸಲು ಸಿಬ್ಬಂದಿಗೆ ಸೂಚಿಸಿದರು. ಅಲ್ಲದೇ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದೆಂದು ವಸಂತ ಲಾಳಿ ತಿಳಿಸಿದರು.  

ನಂತರ ಅಲ್ಲಿನ ಸಾರ್ವಜನಿಕ ಶೌಚಾಲಯಕ್ಕೆ ಭೇಟಿ ನೀಡಿದ ಅಧ್ಯಕ್ಷ, ಉಪಾಧ್ಯಕ್ಷರು ಹಲವಾರು ದಿನಗಳಿಂದ ಸ್ವಚ್ಛತೆಯಿಲ್ಲದೇ ಗಬ್ಬೆದ್ದು ನಾರುತ್ತಿತ್ತು. ಬಳಕೆಗೆ ಯೋಗ್ಯವಲ್ಲದ, ನೀರಿನ ವ್ಯವಸ್ಥೆಯಿಲ್ಲದೇ ಬಾಗಿಲುಗಳನ್ನು ಬಂದ್ ಮಾಡಲಾಗಿತ್ತು. ಇದರಿಂದಾಗಿ ಮಹಿಳೆಯರು ನಿತ್ಯ ಶೌಚಕ್ಕಾಗಿ ಬಹಿರ್ದೆಸೆಗೆ ಹೋಗುವಂತಾಗಿತ್ತು. ಅಧ್ಯಕ್ಷ ವಸಂತ ಲಾಳಿ ಪೌರಕಾರ್ಮಿಕರನ್ನು ಸ್ಥಳಕ್ಕೆ ಕರೆಸಿ 2 ದಿನಗಳಲ್ಲಿ ಸಾರ್ವಜನಿಕ ಶೌಚಾಲಯವನ್ನು ಸ್ವಚ್ಛಗೊಳಿಸಿ, ನೀರಿನ ವ್ಯವಸ್ಥೆ ಕಲ್ಪಿಸಿ, ಮಹಿಳೆಯರಿಗೆ ಅನುಕೂಲ ಮಾಡಿಕೊಡಲಾಗುವುದೆಂದು ಹೇಳಿದರು. 

ಅಕ್ಟೋಬರ್ 13ರಿಂದ 17ರವರೆಗೆ ಚನ್ನವೃಷಭೇಂದ್ರ ದೇವರಕೊಂಡಜ್ಜನವರ ಲೀಲಾಮಠದಲ್ಲಿ 41ನೇ ವೇದಾಂತ ಪರಿಷತ್ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಜಾತ್ರೆಗೆ ರಾಜ್ಯ ಹಾಗೂ ನೆರೆ ರಾಜ್ಯಗಳಿಂದ ಸಹಸ್ರಾರು ಭಕ್ತರು ಆಗಮಿಸಲಿದ್ದಾರೆ. ಜಾತ್ರೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿ, ಭಕ್ತಾಧಿಗಳಿಗೆ ಶೌಚಾಲಯ, ಕುಡಿಯುವ ನೀರು ಮತ್ತು ಸ್ಥಳ ಸ್ವಚ್ಛತೆ ಬಗ್ಗೆ ಪರೀಶೀಲಿಸಿದರು. 

ಅಧ್ಯಕ್ಷ ವಸಂತ ಲಾಳಿ ಮಾತನಾಡಿ ಹಾರೂಗೇರಿ ಪಟ್ಟಣ ವ್ಯಾಪ್ತಿಯಲ್ಲಿ ಅನೇಕ ಸಮಸ್ಯೆಗಳಿದ್ದು, ಇನ್ನು ಮುಂದೆ ಪ್ರತಿವಾರಕ್ಕೊಮ್ಮೆ, ಸಾಧ್ಯವಾದರೆ ಪ್ರತಿದಿನವೂ, ಉಪಾಧ್ಯಕ್ಷರಾದ ಬಸವರಾಜ ಅರಕೇರಿ, ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ವಾರ್ಡ್‌ಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.