‘ನನ್ನ ಪುಟ್ಟ ಕಂದ ಮನೆಯ ದೀಪ’ ಪುತ್ರನ ಜನ್ಮದಿನದ ಸಂತಸದಲ್ಲಿ ರಿಷಬ್ ಶೆಟ್ಟಿ

ಬೆಂಗಳೂರು, ಏ 07,‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’, ‘ಬೆಲ್ ಬಾಟಮ್’, ‘ಕಥಾ ಸಂಗಮ’ ದಂತಹ ಚಿತ್ರಗಳನ್ನು ನೀಡಿರುವ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ, ನಟ, ಲೇಖಕ ರಿಷಬ್ ಶೆಟ್ಟಿಯವರಿಗೆ ಇಂದು ಸಂಭ್ರಮದ ದಿನ. ಕಾರಣ ಏನು ಗೊತ್ತಾ?  ಪುತ್ರನ ಮೊದಲ ವರ್ಷದ ಜನ್ಮದಿನ… ಹೌದು.  ಮಗ ರಣ್ವಿತ್ ಹುಟ್ಟು ಹಬ್ಬದ ದಿನದಂದು ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ದಂಪತಿ ಟ್ವಿಟರ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.ವರುಷದ ಹಿಂದೆ ಹುಟ್ಟಿದ ಈ ಪುಟ್ಟ ಕಂದನ ಜೊತೆ ನನ್ನಲ್ಲೊಬ್ಬ ಅಪ್ಪನೂ ಹುಟ್ಟಿದ. ಅಂದಿನಿಂದ ಇಂದಿನವರೆಗೆ ನಿತ್ಯ ಹಬ್ಬದಂತಿರುವ ಇವನ ಮುಗ್ಧತೆ ಮನೆಗೆ ದೀಪ, ತೊದಲು ಮಾತೇ ತಳಿರು ತೋರಣ, ಹಾಲುಗಲ್ಲದ ನಗು ಹೋಳಿಗೆಯ ಹೂರಣ. ಮೊದಲ ವರ್ಷ ತುಂಬಿದ ಸಡಗರದಲ್ಲಿ ನಿಮ್ಮೆಲ್ಲರ ಆಶಿರ್ವಾದ ಇವನಿಗಿರಲಿ ಎಂದು ರಿಷಬ್ ಟ್ವೀಟ್ ಮಾಡಿದ್ದಾರೆ.ಇದರ ಜತೆಗೆ ಸರಳವಾಗಿ ಆಚರಿಸಿರುವ ಜನ್ಮದಿನದ ಫೋಟೋಗಳನ್ನೂ, ರಣ್ವಿತ್‍ನ ಆಟಗಳ ವಿಡಿಯೋವನ್ನೂ ಶೇರ್ ಮಾಡಿದ್ದಾರೆ.ಇನ್ನು ರಿಷಬ್ ಶೆಟ್ಟಿಯವರ ಆತ್ಮೀಯ ಗೆಳೆಯ, ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಕೂಡ ರಣ್ವಿತ್ ಗೆ ಟ್ವಿಟರ್ ಮೂಲಕ ಜನ್ಮದಿನದ ಶುಭ ಕೋರಿದ್ದಾರೆ.