ಸಂಶೋಧಕರು ಚಿಂತನಶೀಲರಾಗಬೇಕು- ಡಾ.ಕೆ.ಪಿ.ಈರಣ್ಣ

Researchers should be thoughtful - Dr. K.P. Iranna

ಸಂಶೋಧಕರು ಚಿಂತನಶೀಲರಾಗಬೇಕು- ಡಾ.ಕೆ.ಪಿ.ಈರಣ್ಣ  

ಹಂಪಿ 26: ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿಶಾಸ್ತ್ರ ವಿಭಾಗವು ಮಂಟಪ ಸಭಾಂಗಣದಲ್ಲಿ ದಿನಾಂಕ 26ರಂದು ಆಯೋಜಿಸಿದ್ದ ಅಖಿಲ ಕರ್ನಾಟಕ ಇಪ್ಪತ್ತೊಂದನೆಯ ಹಸ್ತಪ್ರತಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕೆ.ಪಿ. ಈರಣ್ಣ ಅವರು ಸಮಾರೋಪ ಭಾಷಣ ಮಾಡುತ್ತ, ಡಾ.ಜಿ. ಜ್ಞಾನಾನಂದ ಮತ್ತು ಜೀವಣ್ಣ ಮಸಳಿ ಅವರ ವಿದ್ವತ್ತನ್ನು ಹೊರಜಗತ್ತಿಗೆ ಪರಿಚಯಿಸುವ ಉನ್ನತ ಕೆಲಸ ಹಸ್ತಪ್ರತಿ ಸಮ್ಮೇಳನದಿಂದ ಸಾಧ್ಯವಾಗಿರುವುದು ಶ್ಲಾಘನೀಯವಾಗಿದೆ ಎಂದರು.  

ಸಂಶೋಧಕರು ತಳಸ್ಪರ್ಶೀಯ ಅಧ್ಯಯನ ಮಾಡಬೇಕು. ಇದರಿಂದ ಅವರ ಅಧ್ಯಯನದ ಹರವು ವಿಸ್ತಾರವಾಗುತ್ತದೆ ಎಂದು ಧಾರವಾಡದ ಹಿರಿಯ ವಿದ್ವಾಂಸ ಡಾ.ಕೆ.ಪಿ. ಈರಣ್ಣ ಅವರು ಕಿವಿಮಾತು ಹೇಳಿದರು. 

ಸಮ್ಮೇಳನಾಧ್ಯಕ್ಷರಾದ ಡಾ.ಜಿ. ಜ್ಞಾನಾನಂದ ಅವರು ಸಂಶೋಧನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ, ಸಂಶೋಧನಾ ವಿದ್ಯಾರ್ಥಿಗಳು ತಮಗೆ ಬೇಕಾದ್ದನ್ನು ಬಯಸಿದ್ದನ್ನು ಪುಸ್ತಕಗಳಲ್ಲಿ ಹುಡುಕಬೇಕು. ಪುಸ್ತಕಗಳು ದಾರಿತೋರಿಸುತ್ತವೆ. ಮನಸ್ಸನ್ನು ಅರಳಿಸುತ್ತವೆ. ಪುಸ್ತಕಗಳಿಂದ ಸಮಾಜ ಸುಖವಾಗಿರುತ್ತದೆ ಎಂದು ಹೇಳಿದರು.  

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ವಿಜಯ್ ಪೂಣಚ್ಚ ತಂಬಂಡ ಅವರು ಸಮ್ಮೇಳನದಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ, ಅತಿಥಿ ಗಣ್ಯರನ್ನು ಗೌರವಿಸಿದರು. ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ವೀರೇಶ ಬಡಿಗೇರ ಅವರು ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಯುತ್ತ ಅಂಚಿಗೆ ತಳ್ಳಲ್ಪಟ್ಟ ನಿರ್ಲಕ್ಷ್ಯಕ್ಕೆ ಒಳಗಾದ ಜ್ಞಾನಶಿಸ್ತುಗಳನ್ನು ಶಿಲ್ಪಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ಸ್ವರ್ಣಶಿಲ್ಪದ ಮೂಲಕ ಅಧ್ಯಯನ ಮಾಡಿ ಜ್ಞಾನಾನಂದರು ಸಂಶೋಧಕರಿಗೆ ಪರ್ಯಾಯ ಚಿಂತನೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ತಿಳಿಸಿದರು. 

ಎರಡು ದಿನಗಳ ಹಸ್ತಪ್ರತಿ ಸಮ್ಮೇಳನದ ಕುರಿತು ಹೊಸಪೇಟೆಯ ಮಾ.ಬ. ಸೋಮಣ್ಣ ಅವರು ವೈವಿಧ್ಯ ವಿಷಯಗಳ ಸಂಪನ್ಮೂಲ ವ್ಯಕ್ತಿಗಳನ್ನು ಸಂಧಿಸಲು ಸಾಧ್ಯವಾಯಿತು. ಇದು ಸ್ವಾರ್ಥದ ಸಮ್ಮೇಳನ ಅಲ್ಲ, ಹೊಟ್ಟೆಯ ತುಂಬ ಉಂಡು ನೆತ್ತಿತುಂಬ ಜ್ಞಾನ ಹೊತ್ತುಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದರೆೆ, ಹಸ್ತಪ್ರತಿ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಪೂರ್ಣಿಮಾ ಅವರು ಸಮ್ಮೇಳನವು ಅಧ್ಯಯನಕ್ಕೆ ಹೊಸ ಸಾಧ್ಯತೆಗಳನ್ನು ತೋರಿಸಿತು ಎಂದು ಸ್ವರಚಿತ ಕವನ ವಾಚಿಸಿದರು. ಸೇಡಂನ ವೀರಭದ್ರ​‍್ಪ ತೆಂಗಳಿ, ಕಾನಾಹೊಸಳ್ಳಿಯ ಡಾ.ವೃಷಭೇಂದ್ರಾಚಾರ್ ಅಭಿಪ್ರಾಯ ಮಂಡಿಸಿದರು.  

ಉಪನ್ಯಾಸಕರಾದ ಮೌನೇಶ ಬಡಿಗೇರ ಮತ್ತು ಗೋಣಿಬಸಪ್ಪ ನಿರೂಪಣೆ ಮಾಡಿದರು. ಬಿ.ಸತೀಶ್ ವಂದಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪ್ರಾರ್ಥಿಸಿದರು.