ಅಥಣಿಗೆ ರೇಲ್ವೆ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಮನವಿ

ಅಥಣಿ 10: ನೂರಾರು ವರ್ಷಗಳ ಇತಿಹಾಸ ಹೊಂದಿರುವ ಅಥಣಿ ತಾಲೂಕಿಗೆ ರೇಲ್ವೆ ಯೋಜನೆಯನ್ನು ಮಂಜೂರು ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೇಲ್ವೆ ಸಚಿವ ಹಾಗೂ ನಮ್ಮ ಜಿಲ್ಲೆಯವರೇ ಆದ ರೇಲ್ವೆ ರಾಜ್ಯ ಸಚಿವರ ಮೇಲೆ ಒತ್ತಡ ತರುವುದಾಗಿ ಶಾಸಕ ಮಹೇಶ ಕುಮಠಳ್ಳಿ ಹೇಳಿದರು.  

     ಅಥಣಿ ಮಾರ್ಗ ರೈಲು ಹೋರಾಟ ವೇದಿಕೆ ನೇತೃತ್ವದಲ್ಲಿ ಹಲವು ಸಂಘಟನೆಗಳ ಬೆಂಬಲದಿಂದ ಆಯೋಜಿಸಿದ್ದ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.  ಅನೇಕ ದಶಕಗಳ ಹಿಂದೆಯೇ ಅಥಣಿ ತಾಲೂಕಿನ ಮೂಲಕ ವಿಜಯಪುರಕ್ಕೆ ರೈಲು ಸಂಪರ್ಕ ಕಲ್ಪಿಸಬೇಕಿತ್ತು ಆದರೆ ಇಲ್ಲಿಯವರೆಗೂ ರೇಲ್ವೆ ಯೋಜನೆ ಅನುಷ್ಠಾನಗೊಳ್ಳದೇ ಇರುವುದು ಬೇಸರದ ಸಂಗತಿ ಎಂದ ಅವರು ರೇಲ್ವೆ ಹೋರಾಟಗಾರರು ಕೈಗೊಳ್ಳುವ ಎಲ್ಲ ನಿರ್ಣಯಗಳಿಗೆ ಬೆಂಬಲಿಸುವುದಾಗಿ ಹೇಳಿದರು.  

     ಹೋರಾಟದ ನೇತೃತ್ವ ವಹಿಸಿದ್ದ ವೇದಿಕೆಯ ಸಂಚಾಲಕ ರವಿ ಪೂಜಾರಿ ಮಾತನಾಡಿ,  ವಿಜಯಪುರದಿಂದ ಪ್ರಾರಂಭಗೊಂಡು ತಿಕೋಟಾ, ತೆಲಸಂಗ, ಐಗಳಿ, ಅಥಣಿ ಮೂಲಕ ಕಾಗವಾಡ ತಾಲೂಕಿನ ಶೇಡಬಾಳ ರೇಲ್ವೆ ಸ್ಟೇಶನ ಮೂಲಕ ಮಹಾರಾಷ್ಟ್ರದ ಮಿರಜ ಝಂಕ್ಶನ್ನಗೆ ಸಂಪರ್ಕ ಕಲ್ಪಿಸುವ ಈ ಯೋಜನೆಗೆ ಕೇಂದ್ರದ ರೇಲ್ವೆ ಇಲಾಖೆ ಮಂಜೂರಾತಿ ಕೂಡ ನೀಡಿತ್ತು ಆದರೆ ಈ ಯೋಜನೆ ಕೆಲ ವರ್ಷಗಳ ಹಿಂದೆಯೇ ಸ್ಥಗಿತಗೊಂಡಿತು ಇದಕ್ಕೆ ಏನು ಕಾರಣ ಎನ್ನುವುದು ಮಾತ್ರ ಗೊತ್ತಾಗಲಿಲ್ಲ ಎಂದರು. 

      ಇದಕ್ಕೂ ಮೊದಲು ಬ್ರಿಟೀಷರ್ ಕಾಲದಲ್ಲಿಯೇ ಈ ಯೋಜನೆಗೆ ಮಂಜೂರಾತಿ ದೊರಕಿತ್ತು ಆದರೆ ಈ ಯೋಜನೆ 72 ವರ್ಷಗಳಿಂದ ನನೆಗುದಿಗೆಗೆ ಬಿದ್ದಿರುವುದು ದುರದೃಷ್ಟಕರ. ನಿಯೋಜಿತ ಈ ಯೋಜನೆಯ ಮಾರ್ಗಕ್ಕೆ ಹೊಂದಿಕೊಂಡು 5 ಸಕ್ಕರೆ ಕಾರಖಾನೆಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಈ ಸಕ್ಕರೆ ಕಾರಖಾನೆಗಳು ರಸ್ತೆ ಮಾರ್ಗವನ್ನೇ ಅವಲಂಬಿಸಿದ್ದು, ಒಂದು ವೇಳೆ ರೇಲ್ವೆ ಯೋಜನೆ ಪೂರ್ಣಗೊಂಡಲ್ಲಿ ಈ ಸಕ್ಕರೆ ಕಾರಖಾನೆಗಳಿಗೆ ಅನಕೂಲವಾಗಲಿದೆ ಜೊತೆಗೆ ಅಥಣಿ ತಾಲೂಕಿನಲ್ಲಿ ವ್ಯಾಪಾರ, ವಹಿವಾಟು, ಕೃಷಿ ಅಭಿವೃದ್ಧಿಯಾಗಿ ಹೆಚ್ಚಿನ ಉದ್ಯೋಗ ಕೂಡ  ಸೃಷ್ಟಿಯಾಗುತ್ತದೆ ಎಂದ ಅವರು ಮತ್ತೊಮ್ಮೆ ಸರ್ವೆ  ಮಾಡಿಸಿ ತಕ್ಷಣ ಈ ಯೋಜನೆಗೆ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.  

      ನಮ್ಮ ಈ ಹೋರಾಟಕ್ಕೆ ಅನೇಕ ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಸಾಮಾಜಿಕ ಸಂಘಟನೆಗಳು ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ನಮ್ಮ ಹೋರಾಟವನ್ನು ಮತ್ತಷ್ಟು ತೀವೃಗೊಳಿಸುತ್ತೇವೆ ಎಂದು ಹೇಳಿದರು.  

      ಹೋರಾಟದಲ್ಲಿ ಆದಿತ್ಯ ಪವಾರ, ದೀಪಕ ಶಿಂಧೆ, ಮಹಾದೇವ ಮಡಿವಾಳ, ಅಣ್ಣಸಾಹೇಬ ತೆಲಸಂಗ, ಅನೀಲ ಮೋರೆ, ಮೋದಿನ ಮೋಳೆ, ಜಗನ್ನಾಥ ಬಾಮನೆ, ಸಿದ್ಧಪ್ಪ ಹಂಡಿಗಿ, ಪ್ರಕಾಶ ಹಿಡಕಲ್,  ಪ್ರಶಾಂತ ಹಿರೇಮನಿ,  ಲಕ್ಷ್ಮಣ ವೈದಿ ಸೇರಿದಂತೆ ನೂರಾರು ಮಹಿಳೆಯರು ಸೇರಿದಂತೆ ಅನೇಕ ಹೋರಾಟಗಾರರು ಪಾಲ್ಗೊಂಡಿದ್ದರು. 

    ಕೆಲ ಕಾಲ ರಸ್ತೆ ತಡೆ ನಡೆಸಿದ ನಂತರ ಉಪ ತಹಶೀಲ್ದಾರ ರಾಜು ಬುಲರ್ಿ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು.  

ಫೋಟೊ ಶೀರ್ಷಿಕೆ -ಅಥಣಿಗೆ ರೇಲ್ವೆ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಹೋರಾಟಗಾರರು ತಹಶೀಲ್ದಾರರ ಮೂಲಕ ಕೇಂದ್ರಕ್ಕೆ ಮನವಿ ಸಲ್ಲಿಸಿದರು.