ಬೆಂಗಳೂರು 22: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿ 7 ಆರೋಪಿಗಳಿಗೆ ನೀಡಿರುವ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ನಡೆದಿದೆ.
ಸರ್ಕಾರದ ಪರ ಹಿರಿಯ ವಕೀಲ ಸಿದ್ದಾರ್ಥ್ ಲೂಥ್ರಾ ವಾದ ಮಂಡಿಸಿದ್ದು, 2ನೇ ಆರೋಪಿ ದರ್ಶನ್ ಪರ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿದ್ದಾರೆ. ಇಬ್ಬರು ಕೋರ್ಟಿನಲ್ಲಿ ಪ್ರಬಲ ವಾದ ಮಂಡಿಸಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ನಟ ದರ್ಶನ್ ವಿರುದ್ದ ಯಾವುದೇ ಸಾಕ್ಷ್ಯಗಳಿಲ್ಲ ಯಾವ ಜಾಗದಲ್ಲಿಯೂ ಸಾಕ್ಷ್ಯಾಧಾರಗಳು ಇಲ್ಲ. ಇಡೀ ಪ್ರಕರಣ ಎರಡು ಹೇಳಿಕೆ ಮೇಲೆ ನಿಂತಿದೆ ಪವಿತ್ರಾಗೆ ಕೆಟ್ಟ ಮೆಸೇಜ್ ಮಾಡಿದ್ದಾರೆ ಅಂತಾ ಆರೋಪವಿದೆ. ನಕಲಿ ಸಾಕ್ಷ್ಯಗಳನ್ನ ಸೃಷ್ಠಿ ಮಾಡಿದ್ದಾರೆ ಎಂದು ಸಿಂಘ್ವಿ ವಾದ ಮಂಡಿಸಿದ್ದಾರೆ.
ಪ್ರಕರಣದಲ್ಲಿ ಐ – ವಿಟ್ನೆಸ್‌ಗಳ ಹೇಳಿಕೆ ಪಡೆಯದೆ ಬಂಧಿಸಲಾಗಿದೆ. ಬಂಧಿಸಿದ ಬಳಿಕ ಹೇಳಿಕೆಗಳನ್ನು ಪಡೆಯಲಾಗಿದೆ ಎಂದಿದ್ದಾರೆ. ‘ಕೃತ್ಯ ನಡೆದ ಸ್ಥಳದಲ್ಲಿ ನನ್ನ ಕೆಲಸಗಾರರು ಇರಲಿಲ್ಲ. ನಾನು ಆ ಜಾಗದ ಮಾಲೀಕನಲ್ಲ.ನನ್ನನ್ನು ಬಂಧಿಸಲು ಯಾವುದೇ ಕಾರಣಗಳು ಇರಲಿಲ್ಲವೆಂದುʼ ದರ್ಶನ್ ಹೇಳಿಕೆಯನ್ನು ಅಭಿಷೇಕ್ ಉಲ್ಲೇಖಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ವಾದ ಮಂಡಿಸಿದ ಸಿದ್ಧಾರ್ಥ್ ಅವರು, ಹತ್ಯೆ ಮಾಡಿದ್ದಕ್ಕೆ ಫೋಟೋಗಳಿವೆ. ಇದಲ್ಲದೆ ಘಟನೆ ಸಂಬಂಧ ಎಲೆಕ್ಟ್ರಾನಿಕ್ ಸಾಕ್ಷಿಗಳಿವೆ. ಕೃತ್ಯದ ಬಗ್ಗೆ ಸಿಸಿಟಿವಿ ದೃಶ್ಯ ಸಿಕ್ಕಿದೆ . ಎಲೆಕ್ಟ್ರಿಕ್ ಶಾಕ್‌ನಿಂದ ರೇಣುಕಾಸ್ವಾಮಿಗೆ ಹಿಂಸೆ ನೀಡಲಾಗಿದೆ. ಮೂಳೆಗಳು ಮುರಿದಿದೆ. ರಕ್ತ ಸುರಿದಿದೆ. ದೇಹವನ್ನು ಪ್ರಾಣಿಗಳು ತಿಂದಿವೆ. ದೇಹದ ಪ್ರಮುಖ ಭಾಗ ರಕ್ತ ಹೆಪ್ಪುಗಟ್ಟಿದೆ. ದರ್ಶನ್ ಸಾಕ್ಷ್ಯಗಳ ಜತೆಯೇ ಓಡಾಡುತ್ತಿದ್ದಾರೆ ಎಂದು ವಾದ ಮಂಡಿಸಿದ್ದಾರೆ.
ಜಾಮೀನು ರದ್ದು ಕೋರಿ ಬೆಂಗಳೂರು ಪೊಲೀಸರು ಸಲ್ಲಿಸಿರುವ ಅರ್ಜಿ ನ್ಯಾ.ಜೆ.ಬಿ.ಪರ್ದೀವಾಲ, ನ್ಯಾ .ಆರ್. ಮಹದೇವನ್ ಅವರ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆದಿದೆ.
ಎರಡು ಕಡೆಯ ವಾದವನ್ನು ಆಲಿಸಿ ಮೇ.14 ರಂದು ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.