ಬೆಂಗಳೂರು, ಮೇ 8, ಖ್ಯಾತ ಛಾಯಾಗ್ರಾಹಕ ಎಸ್.ವಿ. ಶ್ರೀಕಾಂತ್ ಶ್ರೀಕಾಂತ್ ಗುರುವಾರ ಸಂಜೆ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.40 ವರ್ಷಗಳ ಹಿಂದೆ ತಂತ್ರಜ್ಞಾನ ಕಡಿಮೆ ಇದ್ದ ಕಾಲದಲ್ಲಿ, ತಮ್ಮ ಅದ್ಭುತ ಕೆಲಸದಿಂದ ಕನ್ನಡ ಚಿತ್ರರಂಗದಲ್ಲಿ ಮೋಸ್ಟ್ ವಾಂಟೆಡ್ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದ ಶ್ರೀಕಾಂತ್,ಕನ್ನಡ ಚಿತ್ರರಂಗದಲ್ಲಿ 30 ವರ್ಷಗಳ ಕಾಲ 60ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದರು.ಶ್ರೀಕಾಂತ್ ಅವರ ಸಾಧನೆಗೆ ಅತ್ಯುತ್ತಮ ಉದಾಹರಣೆಯೆಂದರೆ, ಡಾ. ರಾಜಕುಮಾರ್ ಅಭಿನಯದ ‘ಬಬ್ರುವಾಹನ’. ಈ ಚಿತ್ರದಲ್ಲಿ ರಾಜಕುಮಾರ್ ಅವರು ಅರ್ಜುನ ಮತ್ತು ಬಬ್ರುವಾಹನನಾಗಿ ನಟಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಕೆಲವು ದೃಶ್ಯಗಳಲ್ಲಿ ಎರಡೂ ಪಾತ್ರಗಳು ಮುಖಾಮುಖಿಯಾಗುತ್ತವೆ. ಟ್ರಿಕ್ ಫೋಟೋಗ್ರಫಿ ಮೂಲಕ ಈ ದೃಶ್ಯಗಳನ್ನು ಚಿತ್ರೀಕರಣ ಮಾಡಿ, ಟ್ರಿಕ್ ಫೋಟೋಗ್ರಫಿ ತಜ್ಞ ಎಂದೇ ಜನಪ್ರಿಯರಾದವರು ಎಸ್.ವಿ. ಶ್ರೀಕಾಂತ್.
ಮಾಸ್ಕ್, ಡಬ್ಬಲ್ ಆ್ಯಕ್ಟಿಂಗ್, ನೆರಳು-ಬೆಳಕಿನ ಆಟಗಳಿಗೆ ಜನಪ್ರಿಯರಾಗಿದ್ದ ಶ್ರೀಕಾಂತ್ ಅವರು ಸಾಕಷ್ಟು ದ್ವಿಪಾತ್ರ ಮತ್ತು ತ್ರಿಪಾತ್ರಾಭಿನಯದ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ‘ರಾಣಿ ಮಹಾರಾಣಿ’, ‘ಅಣ್ಣಾವ್ರ ಮಕ್ಕಳು’, ‘ಅದೇ ಕಣ್ಣು’, ‘ಶ್ರಾವಣ ಬಂತು’, ‘ವಿಜಯ್ ವಿಕ್ರಮ್’, ‘ನಾ ನಿನ್ನ ಬಿಡಲಾರೆ’ ಮುಂತಾದ ಹಲವು ಚಿತ್ರಗಳಲ್ಲಿ ತಮ್ಮ ಟ್ರಿಕ್ ೆಟೋಗ್ರಫಿ ಮೂಲಕ ಗಮನಸೆಳೆದಿದ್ದ ಎಸ್.ವಿ. ಶ್ರೀಕಾಂತ್, ‘ಸ್ವರ್ಣ ಗೌರಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಸಹಾಯಕ ಛಾಯಾಗ್ರಾಹಕನಾಗಿ ಬಂದರು.
ಆ ನಂತರ 1963ರಲ್ಲಿ ಬಿಡುಗಡೆಯಾದ ‘ಜೀವನ ತರಂಗ’ ಚಿತ್ರದಲ್ಲಿ ಸ್ವತಂತ್ರ ಛಾಯಾಗ್ರಾಹಕರಾದ ಅವರು, ಆ ನಂತರ ಮೂರು ದಶಕಗಳ ಕಾಲ ಬಹುಬೇಡಿಕೆಯ ಛಾಯಾಗ್ರಾಹಕರಾದ. ಡಾ. ರಾಜಕುಮಾರ್ ಅವರ ಚಿತ್ರಗಳಿಗೆ ಹೆಚ್ಚು ಕೆಲಸ ಮಾಡುವುದರ ಜತೆಗೆ, ಕನ್ನಡ ಚಿತ್ರರಂಗದ ಎಲ್ಲಾ ಜನಪ್ರಿಯ ಹೀರೋಗಳಿಗೂ ಛಾಯಾಗ್ರಾಹಕರಾಗಿದ್ದ ಅವರು, ಪುಟ್ಟಣ್ಣ ಕಣಗಾಲ್ ಅವರ ‘ಕರುಳಿನ ಕರೆ’, ‘ಸಾಕ್ಷಾತ್ಕಾರ’, ‘ಗೆಜ್ಜೆಪೂಜೆ’, ‘ಎಡಕಲ್ಲು ಗುಡ್ಡದ ಮೇಲೆ’, ‘ಉಪಾಸನೆ’ ಮುಂತಾದ ಹಲವು ಚಿತ್ರಗಳಿಗೆ ಛಾಯಾಗ್ರಾಹಕರಾಗಿದ್ದರು. ಈ ಪೈಕಿ ‘ಮಾರ್ಗದರ್ಶಿ’, ‘ಉಪಾಸನೆ’ ಮತ್ತು ‘ಗೆಜ್ಜೆಪೂಜೆ’ ಚಿತ್ರಗಳ ಚಿತ್ರೀಕರಣಕ್ಕಾಗಿ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ಚಿತ್ರರಂಗದಿಂದ ದೂರವಾಗಿ ನಿವೃತ್ತಿ ಜೀವನ ನಡೆಸುತ್ತಿದ್ದ ಅವರು, ಇತ್ತೀಚೆಗೆ ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದರು. ಗುರುವಾರ ಸಂಜೆ ಸುಮಾರು ಐದು ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಚಿತ್ರರಂಗ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.