ಬೆಂಗಳೂರು, ಜೂ 14, ರಿಯಲ್ ಸ್ಟಾರ್ ಅಂದಾಕ್ಷಣ ಕಣ್ಣಮುಂದೆ ಕಾಣುವ ಚಿತ್ರ ಸ್ಯಾಂಡಲ್‌ವುಡ್ ನಟ "ಉಪೆಂದ್ರ". ಅವರದ್ದು ವಿಶಿಷ್ಟ ಮ್ಯಾನರಿಸಂ, ವಿಚಿತ್ರ ಸಂಭಾಷಣೆ, ಗೊಂದಲ ಮೂಡಿಸುವ ನಿರ್ದೇಶನದಿಂದ ಸೈ ಎನಿಸಿಕೊಂಡ ನಟ. ಈಗ ತಾನೊಬ್ಬ ಮಾದರಿ ಕಷಿಕ ಎನ್ನುವುದನ್ನೂ ತೋರಿಸಿಕೊಟ್ಟಿದ್ದಾರೆ. ಎಲ್ಲರ ಬಾಯಲ್ಲಿ ಓಳು ಬರೀ ಓಳು ಎಂದು ಗುನಿಗುಸುವಂತೆ ಮಾಡಿದ ಉಪೇಂದ್ರ. ಹೀಗೆ ನಿರ್ದೇಶನ, ನಟನೆ, ಹಾಡು, ಸಂಭಾಷಣೆಯಷ್ಟೇ ಅಲ್ಲದೇ ಕಳೆದ ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಪ್ರಜಾಕೀಯ ಪಕ್ಷದ ಮೂಲಕ ರಾಜಕೀಯದಲ್ಲಿಯೂ ಛಾಪು ಮೂಡಿಸಲು ಪ್ರಯತ್ನಿಸಿದ್ದರು. ಆದರೆ ಉಪೇಂದ್ರ ಅವರಿಗೆ ರಾಜಕೀಯ ಕೈಹಿಡಿಯಲಿಲ್ಲ. ಬಿಜೆಪಿಗೆ ಪರೋಕ್ಷವಾಗಿ ಬೆಂಬಲಿಸಲು ಉಪೇಂದ್ರ ರಾಜಕೀಯದಲ್ಲಿದ್ದಾರೆ ಎಂದು ಆರೋಪಿಸಲಾಗಿತ್ತು. ಅದೇನೇ ಇರಲಿ ಈಗ ಉಪೇಂದ್ರ ಸುದ್ದಿಕೇಂದ್ರಕ್ಕೆ ಬಂದಿದ್ದು ಸಿನಿಮಾದಿಂದಾಗಲೀ, ರಾಜಕೀಯದಿಂದಾಗಲೀ ಅಲ್ಲ. ಕೃಷಿಯಿಂದಾಗಿ.ಅರೇ ಇದೇನಿದು? ಉಪೇಂದ್ರನಿಗೂ ಬೇಸಾಯಕ್ಕೂ ಎಲ್ಲಿಯ ನಂಟು ಎನ್ನುವ ಕುತೂಹಲ ಸಹಜ. ಈಗ ರಿಯಲ್ ಸ್ಟಾರ್ ತಾನೊಬ್ಬ ಮಾದರಿ ಕೃಷಿಕ ಎಂದು ಹೇಳಹೊರಟಿದ್ದಾರೆ.
ಅಂದ್ಹಾಗೆ ಎರಡು ತಿಂಗಳ ಕೊರೊನಾ ಬಿಗಿ ಲಾಕ್ ಡೌನ್ ದಿನಗಳನ್ನು ಅದೆಷ್ಟೋ ನಟನಟಿಯರು ಚಿತ್ರರಂಗದ ಮಂದಿ ಮನೆಕೆಲಸ ಕಲಿಯಲೋ ವ್ಯಾಯಾಮ ಮಾಡಲೋ, ದೇಹದಂಡಿಸಲೋ ಅಥವಾ ಇನ್ನೇನೋ ಹೊಸತನ್ನು ಕಲಿತು ಕಲಿಸುವಲ್ಲಿ ತೊಡಗಿಸಿಕೊಂಡಿದ್ದರೆ ಇತ್ತ ಉಪ್ಪಿ ಮಾತ್ರ ಬೇಸಾಯದಲ್ಲಿ ಮಗ್ನರಾಗಿದ್ದರು. ತಮ್ಮ ಜಮೀನಿನಲ್ಲಿ ಎರಡು ತಿಂಗಳ ಹಿಂದೆ ತಮ್ಮ ಹುಡುಗರೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡ ಉಪೇಂದ್ರ, ಜಮೀನಿನಲ್ಲಿ ಮೂರ್ನಾಲ್ಕು ಬಗೆಯ ಬದನೆಕಾಯಿ, ಹಸಿಮೆಣಸು, ಟೊಮಾಟೋ, ಸೌತೆಕಾಯಿ ಸೇರಿದಂತೆ ಮಿಶ್ರ ತರಕಾರಿ ಬೆಳೆಯಲು ತೊಡಗಿಕೊಂಡರು. ಅದು ಕೂಡ ಕೇವಲ ಸಗಣಿಯಂತಹ ನೈಸರ್ಗಿಕಗೊಬ್ಬರ ಬಳಸಿ. ಈಗ ತರಕಾರಿಗಳೆಲ್ಲ ಎಲ್ಲರ ಕಣ್ಣು ಕುಕ್ಕುವಂತೆ ಫಲ ನೀಡಿದ್ದು, ಉಪೇಂದ್ರ ಕೃಷಿ ಚಟುವಟಿಕೆಯಿಂದ ತುಂಬಾನೆ ಸಂತಸಪಟ್ಟಿದ್ದಾರೆ. ಅಷ್ಟೆ ಅಲ್ಲ ಇದೆಲ್ಲದರ ವಿಡಿಯೋವನ್ನು ಇನ್ಸ್ಟಾಗ್ರಾಮ್ ಸೇರಿ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.ವಿಡಿಯೋ ಮೂಲಕ ಸಂದೇಶ ಸಾರಿರುವ ಉಪ್ಪಿ, ಬೇಸಾಯಕ್ಕೆ ರಾಸಾಯನಿಕ ಕ್ರಿಮಿನಾಶಕ ಬಳಸಬೇಡಿ. ಬರೀ ಸಾವಯವ ಗೊಬ್ಬರ ಬಳಸಿ. ಎಲ್ಲೋ ಅಲ್ಪಸ್ವಲ್ಪ ಫಸಲನ್ನು ಕ್ರಿಮಿಗಳು ಹುಳಗಳು ತಿನ್ನಬಹುದು. ಅವಕ್ಕೂ ಸಹ ಭೂಮಿ ಮೇಲೆ ಜೀವಿಸುವ ಹಕ್ಕಿದೆ ಎಂದಿದ್ದಾರೆ.