ಸಿಎಎ ವಿಷಯದಲ್ಲಿ ರವಿಶಂಕರ್ ಗುರೂಜಿ ಕೇಂದ್ರಕ್ಕೆ ಸಂಚಲನ ಸಲಹೆ

ನವದೆಹಲಿ, ಫೆ ೧೩:   ಪೌರತ್ವ ತಿದ್ದುಪಡಿ ಕಾಯ್ದೆ - ಸಿಎಎ   ವಿಷಯದಲ್ಲಿ ಆರ್ಟ್ ಆಫ್ ಲಿವಿಂಗ್  ಮುಖ್ಯಸ್ಥ  ಶ್ರೀ ಶ್ರೀ ಶ್ರೀ  ರವಿಶಂಕರ್ ಅವರು ಗುರುವಾರ ಸಂಚಲನಾತ್ಮಕ  ಪ್ರಸ್ತಾಪವೊಂದನ್ನು  ಕೇಂದ್ರ ಸರ್ಕಾರದ  ಮುಂದಿರಿಸಿದ್ದಾರೆ.  

ಪಾಕಿಸ್ತಾನದಲ್ಲಿ ಕಿರುಕುಳಗಳಿಗೆ  ಒಳಗಾಗುವ  ಮುಸ್ಲಿಮರನ್ನು  ಸಹ   ಸಿಎಎ   ಕಾಯ್ದೆಯಡಿ  ಸೇರ್ಪೆಡೆಗೊಳಿಸಬೇಕು    ಎಂದು  ಅವರು  ಸಲಹೆ  ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿ  ವಾಹಿನಿಯೊಂದು ಆಯೋಜಿಸಿದ್ದ    ಸಮ್ಮಿಟ್ -೨೦೨೦   ಸಮಾವೇಶದಲ್ಲಿ  ಪಾಲ್ಗೊಂಡು ಮಾತನಾಡಿದ  ಅವರು, ಪೌರತ್ವ ತಿದ್ದುಪಡಿ ಕಾಯ್ದೆ ದೇಶಕ್ಕೆ ಅತ್ಯಗತ್ಯವಾಗಿದೆ.  ಪಾಕಿಸ್ತಾನದಲ್ಲಿ ಮುಸ್ಲಿಮರಲ್ಲಿನ  ಒಂದು  ವರ್ಗ  ಕೂಡಾ  ಅಲ್ಲಿ  ತೀವ್ರ ಕಿರುಕುಳ  ಎದುರಿಸುತ್ತಿದೆ.  ನಾವು  ಅವರ ಬಗ್ಗೆಯೂ ಆಲೋಚಿಸಬೇಕು.    ಮುಸ್ಲಿಂ  ದೇಶದಲ್ಲಿ  ಮುಸ್ಲಿಮರೇ ದಬ್ಬಾಳಿಕೆಗೆ ಒಳಗಾಗುತ್ತಿದ್ದಾರೆ.   ಅವರಿಗೆ  ಭಾರತದಲ್ಲಿ ಆಶ್ರಯ  ಕಲ್ಪಿಸಲು  ಯಾವುದೇ  ಸಂಕೋಚ ಪಡುವ ಅಗತ್ಯವಿಲ್ಲ ಎಂದು   ರವಿಶಂಕರ್ ಹೇಳಿದ್ದಾರೆ.

ಈ  ಹಿಂದೆಯೂ  ಶ್ರೀ ಶ್ರೀ ಶ್ರೀ   ಇದೇ ರೀತಿಯ ಪ್ರಸ್ತಾಪವನ್ನು  ಕೇಂದ್ರ ಸರ್ಕಾರದ  ಮುಂದಿಟ್ಟಿದ್ದರು.   ದೇಶದಲ್ಲಿ ನೆಲೆಸಿರುವ  ಶ್ರೀಲಂಕಾದ ನಿರಾಶ್ರಿತ ತಮಿಳರಿಗೆ ಭಾರತೀಯ ಪೌರತ್ವ ನೀಡಬೇಕು ಎಂದು ಸೂಚಿಸಿ.  ಸಿಎಎ ಕಾಯ್ದೆ  ವ್ಯಾಪ್ತಿಗೆ   ಶ್ರೀಲಂಕಾದ ತಮಿಳರನ್ನು   ಸೇರಿಸಬೇಕು ಎಂದರು.  ಎಪಿಜೆ ಅಬ್ದುಲ್ ಕಲಾಂ  ರಾಷ್ಟ್ರಪತಿಗಳಾಗಿದ್ದ  ಅವಧಿಯಲ್ಲಿ     ಈ ಸಂಬಂಧ ಅಭಿಯಾನ  ನಡೆಸಿ,  ಒಂದು ಕೋಟಿ ಸಹಿಗಳನ್ನು  ಸಂಗ್ರಹಿಸಲಾಗಿತ್ತು.  ೩೫ ವರ್ಷಗಳಿಂದ  ದೇಶದಲ್ಲಿ   ನೆಲೆಸಿರುವ ಶ್ರೀಲಂಕಾ ನಿರಾಶ್ರಿತರಿಗೆ ಭಾರತೀಯ ಪೌರತ್ವ ಕಲ್ಪಿಸಬೇಕೆಂಬ   ಬೇಡಿಕೆಯನ್ನು   ರವಿಶಂಕರ್   ಮತ್ತೆ   ಸ್ಮರಿಸಿದ್ದಾರೆ.

ಇನ್ನೂ  ಅಯೋಧ್ಯೆಯ ವಿಷಯ ಕುರಿತು   ಪ್ರತಿಕ್ರಿಯಿಸಿದ ರವಿಶಂಕರ್  ಅಯೋಧ್ಯೆಯ ವಿಷಯ  ಮುಗಿದಿದೆ.  ವಿವಾದ ಇತ್ಯರ್ಥಗೊಂಡಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ಅವರು ಹೇಳಿದರು.