ಬೈಲಹೊಂಗಲ: ಅಪರೂಪದ ನೀಲಿ ಬಣ್ಣದ ನೇರಳೆ ಹಣ್ಣು

ಶರೀಫ ನದಾಫ

ಬೈಲಹೊಂಗಲ 13:  ತಾಲೂಕಿನಲ್ಲಿ ಮಾರುಕಟ್ಟೆಗೆ ನೇರಳೆ ಹಣ್ಣಿನ ಪ್ರವೇಶ ಆಗಿದೆ. ಅಪರೂಪದ ಈ ನೀಲಿ ಬಣ್ಣದ ನೇರಳೆ ಹಣ್ಣು ಗ್ರಾಹಕರನ್ನು ಸೆಳೆಯುತ್ತಿದೆ.

       ಸಮೀಪದ ಖಾನಾಪುರ, ಗಂದಿಗವಾಡ, ಸುತ್ತಲಿನ ಗುಡ್ಡದ ಪ್ರದೇಶಗಳಿಂದ ನೇರಳೆ ಹಣ್ಣನ್ನು ತಂದು ಮಹಿಳೆಯರು ಇಲ್ಲಿಯ ಬಸ್ ನಿಲ್ದಾಣದ ಆವರಣದ ಕಟ್ಟೆಯ ಮೇಲೆ  ಬೆಳಿಗ್ಗೆ 7 ಗಂಟೆಗೆ  ನೇರಳೆ ಹಣ್ಣಿನ ಬುಟ್ಟಿಗಳನ್ನು ಮಾರಲು ಬರುತ್ತಾರೆ. ವ್ಯಾಪಾರಿಗಳು ಬುಟ್ಟಿಗೆ ರೂ. 350 ರಿಂದ 400 ಒಂದರಂತೆ  ಖರೀದಿಸುತ್ತಾರೆ. ನಂತರ ಅವರು ಬಸ್ ನಿಲ್ದಾಣ, ಸಿನಿಮಾ ಮಂದಿರ ಇತರೆ ಜನಬೀಡ ಪ್ರದೇಶಗಳಲ್ಲಿ ಮಾರಲು ತೆರಳುತ್ತಾರೆ.

       ನೇರಳೆ ಹಣ್ಣಿಗೆ ತನ್ನದೇ ಆದ ವಿಶಿಷ್ಟ ಸ್ಥಾನ ಇದೆ. ಸಾಮಾನ್ಯವಾಗಿ ಮಾರ್ಚ, ಏಪ್ರಿಲ್ ತಿಂಗಳಲ್ಲಿ ಹಸಿರಿನಿಂದ ಕಂಗೊಳಿಸುವ ನೇರಳೆ ಹಣ್ಣಿನ ಮರಗಳು ಹೂ ಬೀಡುತ್ತವೆ. ನಂತರ ಜೂನ ಮೊದಲ ವಾರಕ್ಕೆ ಹಣ್ಣುಗಳು ನೀಲಿಯ ಬಣ್ಣಕ್ಕೆ ತಿರುಗಿ ರುಚಿಕರವಾಗುತ್ತದೆ. ತಾಲೂಕಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಈ ಮರಗಳು ಇಲ್ಲ.  ಈ ಹಣ್ಣು ಜೂನ್ ತಿಂಗಳಿನಲ್ಲಿ ಸಿಗಲಿದ್ದು ಈ ವೇಳೆಯಲ್ಲಿ ನೇರಳೆ ಹಣ್ಣಿನ ಸುಗ್ಗಿ ಕಾಲ. ಪಟ್ಟಣದ ಶಾಲಾ, ಕಾಲೇಜು ಸುನಿಮಾ  ಹೋಟೆಲ್ ಜನಬಿಡ ಪ್ರದೇಶಗಳಲ್ಲಿ ನೇರಳೆ ಹಣ್ಣು ಮಾರಾಟ ಜೋರು.

      ವರ್ಷಕ್ಕೊಮ್ಮೆ ಸಿಗುವ ಈ ಹಣ್ಣುಗಳು  ಬಾಯಿ ರುಚಿಗಷ್ಟೆ ಅಲ್ಲದೆ ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು. ಈ ಹಣ್ಣುಗಳಲ್ಲಿ ಔಷಧಿಯ ಗುಣವಿದ್ದು, ಮಧುಮೇಹಿ ರೋಗಿಗಳಂತೂ ರಾಮಬಾಣವೆಂದು ಪ್ರಖ್ಯಾತಿ ಪಡೆದಿದೆ.  ಮಧುಮೇಹಿಗಳಿಗೆ ನೇರಳೆ ಹಣ್ಣು  ಉತ್ತಮ ಔಷಧಿ, ನಿತ್ಯ ತಿಂದರೆ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರುತ್ತದೆ.  ಈ ಹಣ್ಣು ತಿನ್ನುವುದರಿಂದ ಅಜೀರ್ಣ ಸಮಸ್ಯೆಗಳು ದೂರವಾಗಿ, ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಫಾತಿಮಾಬಿ.