ರಾಯಣ್ಣ ಸೊಸೈಟಿ ಬಹುಕೋಟಿ ವಂಚನೆ ಪ್ರಕರಣದ ಸಿಐಡಿಗೆ

ಬೆಳಗಾವಿ : ಠೇವಣಿದಾರರಿಗೆ ಬಹುಕೋಟಿ ವಂಚನೆ ಮಾಡಿರುವ ಆರೋಪದ ಹಿನ್ನಲೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸೈಟಿಯಲ್ಲಿ ಪ್ರಕರಣದ ತನಿಖೆಯನ್ನು ಇಲ್ಲಿನ ಮಹಾನಗರ ಪೊಲೀಸರು ಸಿಐಡಿಗೆ ಹಸ್ತಾಂತರ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 

ಸೊಸೈಟಿ ಅಧ್ಯಕ್ಷ ಆನಂದ ಅಪ್ಪುಗೋಳ ಅವರು ನೂರಾರು ಕೋಟಿ ರೂ. ಹಣವನ್ನು ಗ್ರಾಹಕರಿಗೆ ಮರಳಿಸದೇ ಗ್ರಾಹಕರಿಗೆ ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ. 2017ರ ಸೆಪ್ಟೆಂಬರ್ ತಿಂಗಳಲ್ಲಿ ಬೆಳಕಿಗೆ ಬಂದಿದ್ದ ಈ ಬಹುಕೋಟಿ ವಂಚನೆ ಪ್ರಕರಣದ ಕುರಿತು ಸಹಕಾರ ಇಲಾಖೆ ನಿಬಂಧಕರು ಖಡೇಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ಆನಂದ ಅಪ್ಪುಗೋಳ ತಲೆಮರೆಸಿಕೊಂಡಿದ್ದರು. ಮುಂಬೈನ ಸಂಬಂಧಿಕರ ಮನೆಯಲ್ಲಿ ತಂಗಿದ್ದ ಅಪ್ಪುಗೋಳ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿ, ನಗರಕ್ಕೆ ಕರೆತಂದಿದ್ದರು. ಸದ್ಯ ಹೈಕೋಟರ್ಿನಿಂದ ಜಾಮೀನು ಪಡೆದಿರುವ ಅಪ್ಪುಗೋಳ ಸದ್ಯ ಮನೆಯಲ್ಲೇ ಇದ್ದು, ತಿಂಗಳಿಗೊಮ್ಮೆ ಸಿಸಿಬಿ ಠಾಣೆಗೆ ವಿಚಾರಣೆಗಾಗಿ ಹಾಜರಾಗುತ್ತಿದ್ದರು.

ತಾವು ಸೋಸೈಟಿಯಲ್ಲಿ ಇಟ್ಟಿರುವ ಠೇವಣಿಯ ಹಣ ಮರಳಿಸುವಂತೆ ಗ್ರಾಹಕರು ಕಳೆದ ಒಂದು ವರ್ಷದಿಂದ ನಿರಂತರ ಹೋರಾಟ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಿಸಿಬಿಯಿಂದ ಈ ಪ್ರಕರಣ ಇದೀಗ ಸಿಐಡಿಗೆ ಹಸ್ತಾಂತರವಾಗಿದ್ದು, ಶೀಘ್ರವೇ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.