ರಾಮನಗರ, ಮಾ.13, ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ದರೋಡೆಕೋರನ ಮೇಲೆ ಪೊಲೀಸರು ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನ ಚಿಕ್ಕಮಳೂರು ಬಳಿ ಗುರುವಾರ ತಡರಾತ್ರಿ ಗುಂಡು ಹಾರಿಸಿ ಬಂಧಿಸಿದ್ದಾರೆ.ರಮೇಶ್ ಅಲಿಯಾಸ್ ಜಾಕಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.ದರೋಡೆ ಪ್ರಕರಣದ ಆರೋಪಿಯನ್ನು ಸ್ಥಳ ಮಹಜರಿಗೆ ಕರೆದೊಯ್ಯುವ ವೇಳೆ ಆತ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದನು. ಈ ಸಂದರ್ಭದಲ್ಲಿ ಪೊಲೀಸರು ಆತನಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಆದರೂ, ಆತ ಪೊಲೀಸರು ಮಾತು ಲೆಕ್ಕಿಸದ ಹಿನ್ನೆಲೆಯಲ್ಲಿ ಚನ್ನಪಟ್ಟಣ ಗ್ರಾಮಾಂತರ ಠಾಣೆಯ ಪಿಐ ವಸಂತ್ ಕುಮಾರ್ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆ ವೇಳೆ ಮುಖ್ಯಪೇದೆ ನಾಗರಾಜ್ ಹೆಚ್.ಬಿ.ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕೆಹೆಚ್ಬಿ ಕಾಲೊನಿಯಲ್ಲಿ ಇತ್ತೀಚೆಗೆ ಶಿಕ್ಷಕ ಒಬ್ಬರ ಮನೆಗೆ ನುಗ್ಗಿ ಹಾಡಹಗಲೇ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಅಲಿಯಾಸ್ ಜಾಕಿಯನ್ನು ಬಂಧಿಸಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಡಿಎಸ್ಪಿ ಓಂಪ್ರಕಾಶ್ ನೇತೃತ್ವದಲ್ಲಿ ತನಿಖಾಧಿಕಾರಿ ವಸಂತ ಕುಮಾರ್ ಆರೋಪಿ ರಮೇಶ್ ಅಲಿಯಾಸ್ ಜಾಕಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.ತನಿಖೆಗೆ ಸಂಬಂಧಪಟ್ಟಂತೆ ತಡರಾತ್ರಿ ಸುಮಾರು 12.45 ರ ಸಮಯದಲ್ಲಿ ಆರೋಪಿ ರಮೇಶ್ ನನ್ನು ತನಿಖಾಧಿಕಾರಿ ವಸಂತ್, ಪಿಎಸ್ಐ ಪ್ರಕಾಶ್ ಹಾಗೂ ಸಿಬ್ಬಂದಿ ಚಿಕ್ಕಮಳೂರಿಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಪೊಲೀಸರ ವಶದಲ್ಲಿದ ಆತ ಮುಖ್ಯ ಪೇದೆ ನಾಗರಾಜ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಲು ಯತ್ನಿಸಿದ್ದನು.ಈ ಸಂದರ್ಭದಲ್ಲಿ ಆತ್ಮ ರಕ್ಷಣೆಗಾಗಿ ಸಿಪಿಐ ವಸಂತ್ ಕುಮಾರ್ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.ಸದ್ಯ ಆರೋಪಿಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹಾಗೂ ಗಾಯಾಳು ಮುಖ್ಯ ಪೇದೆಗೆ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ರಮೇಶ್ ಅಲಿಯಾಸ್ ಜಾಕಿ ವಿರುದ್ಧ ಬೆಂಗಳೂರು ನಗರ, ಶಿವಮೊಗ್ಗ, ಬಂಟ್ವಾಳ ಸೇರಿದಂತೆ ಹಲವು ಕಡೆ ಕೊಲೆ, ಸುಲಿಗೆ ಮತ್ತಿತರ 15 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಘಟನೆಗೆ ಸಂಬಂಧಿಸಿದಂತೆ ಚನ್ನಪಟ್ಟಣ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 307, 353, 332 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.