ಶಾಲೆಯಲ್ಲೊಂದು ವಿಶಿಷ್ಟ ರೀತಿಯಲ್ಲಿ ಸಂಕ್ರಾಂತಿ ಆಚರಣೆ
ಕಬ್ಬು, ಜೋಳ ರಾಶಿಯಲ್ಲಿ ನೃತ್ಯ ಮಾಡಿದ ವಿದ್ಯಾರ್ಥಿನಿಯರು
ಮುಧೋಳ 15: ಸಂಕ್ರಾಂತಿ ಎಂದರೆ ಸಮೃದ್ಧಿಯ ಸಂಕೇತ, ಸೂರ್ಯ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿನತ್ತ ಹೊರಳುವ ಮೂಲಕ ಹೊಸತನಕ್ಕೆ ತೆರೆದುಕೊಳ್ಳಲು ಇಡೀ ಜೀವಕೋಟಿಗೆ ಪ್ರೇರಣೆ ನೀಡುವ ಹಬ್ಬವಾಗಿದೆ ಎಂದು ನಿವೃತ್ತ ಉಪನ್ಯಾಸಕಿ ವಿಜಯಾ ಹಂಗರಗಿ ಹೇಳಿದರು.
ಮಂಗಳವಾರ ನಗರದ ತ್ರಿವೇಣಿ ಶಿಕ್ಷಣ ಸಂಸ್ಥೆಯ ಶ್ರೀ ಸಂಗಮನಾಥ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಸಿಬಿ.ಎಸ್.ಇ ಶಾಲೆಯ ವಿದ್ಯಾರ್ಥಿ ಹಾಗೂ ಶಿಕ್ಷಕ ವೃಂದ ಹಮ್ಮಿಕೊಂಡ ಸಂಕ್ರಾಂತಿ ಸಂಭ್ರಮ-2025ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹಸಿರಿಗೆ ಹೊಸ ಉಸಿರು, ನಿಸರ್ಗದಲ್ಲಾಗುವ ಬದಲಾವಣೆಯೊಂದಿಗೆ ಬದುಕು ಕಟ್ಟಿಕೊಳ್ಳುವ ಈ ಹಬ್ಬ ಮನುಕುಲಕ್ಕೆ ವಿಶಿಷ್ಟ ಸಂಭ್ರಮವಾಗಿದೆ ಎಂದು ಅವರು ಹೇಳಿದರು. ಮುಖ್ಯೋಪಾಧ್ಯಾಯ ವೆಂಕಟೇಶ ಗುಡೆಪ್ಪನವರ ಮಾತನಾಡಿ ಸಂಕ್ರಾಂತಿ ಹಬ್ಬದ ಮೂಲಕ ಕುಟುಂಬ ಸದಸ್ಯರೆಲ್ಲರೂ ಒಂದೆಡೆ ಕೂಡಲು ಒಂದು ವಿಶೇಷ ಅವಕಾಶ ಎಳ್ಳು-ಬೆಲ್ಲದೊಂದಿಗೆ ಸೇವಿಸುವ ಈ ಹಬ್ಬ ಮನುಕುಲವೆಲ್ಲ ಕಷ್ಟ-ಸುಖವನ್ನು ಸಮಾನವಾಗಿ ಸ್ವಿಕರಿಸಿ ಒಂದಾಗಿ ಹೋಗುವ ಮಾರ್ಗವನ್ನು ಈ ಹಬ್ಬ ತೋರಿಸುತ್ತದೆ. ಆದರೆ ಇತ್ತೀಜಿನ ದಿನಮಾನಗಳಲ್ಲಿ ಹಬ್ಬಗಳ ಸಂಭ್ರಮ ಕಡಿಮೆಯಾಗಿ ವಿದೇಶ ಸಂಸ್ಕೃತಿ ನಮ್ಮ ಹಬ್ಬದಲ್ಲಿ ಸೇರಿಕೊಳ್ಳುವದರಿಂದ ಅಪಾರ್ಥವಾಗಿ ಹೊಗುತ್ತಿವೆ. ನಮ್ಮ ಸಂಸ್ಕೃತಿ ಗ್ರಾಮೀಣ ಸೊಗಡು ಸಂಪ್ರದಾಯ, ಪರಂಪರೆ ನಿರಂತರವಾಗಿ ಸಾಗಲು ಹಾಗೂ ನಮ್ಮ ಉಡುಪಿ ಈ ಹಬ್ಬದ ದಿನಗಳಲ್ಲಾದರೂ ಹೊರಬರಲಿ ಎನ್ನುವ ಉದ್ದೇಶದಿಂದ ವರ್ಷದ ಎಲ್ಲ ಹಬ್ಬಗಳನ್ನು ನಾವು ವಿಶೇಷವಾಗಿ ಶಾಲಾ ಮಕ್ಕಳಿಂದ ಆಚರಿಸುತ್ತಾ ಬಂದಿದ್ದು ಈ ಸಂಕ್ರಾಂತಿಯನ್ನೂ ಸಹ ವಿಶೇಷವಾಗಿ ನಾವು ಆಚರಿಸಿದ್ದೇವೆ. ಮಕ್ಕಳು ಹಾಗೂ ಪಾಲಕರು ಈ ಹಬ್ಬಕ್ಕೆ ವಿಶೇಷವಾಗಿ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತ್ರಿವೇಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ನಿರ್ಮಲಾ ಎಸ್.ಮಲಘಾಣ, ಸಪ್ತಸ್ವರ ಸಂಗೀತ ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಪಾಟೀಲ್, ಶ್ರೀದೇವಿ ಅಂಗಡಿ, ರುಕ್ಮವ್ವ ಚಿಕ್ಕೂರ ಕಮಲಾ ಕುಬಸದ, ಸುನಿತಾ ಪಾಟೀಲ್, ಆಡಳಿತಾಧಿಕಾರಿ ಮಲ್ಲು ಕಳ್ಳೆನವರ, ಮುಖ್ಯೋಪಾಧ್ಯಾಯ ವೆಂಕಟೇಶ ಗುಡೆಪ್ಪನವರ, ಪ್ರಾಚಾರ್ಯ ಸುರೇಶ ಭಜಂತ್ರಿ ಸೇರಿದಂತೆ ಶಿಕ್ಷಕರು ಸುಮಾರು 850ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮ ಪಟ್ಟರು.
ಎಲ್ಲಿ ನೋಡಿದಲ್ಲಿ ಹಬ್ಬದ ವಾತಾವರಣ ಹೊಸ ಸಾಂಪ್ರದಾಯಕ ಬಟ್ಟೆಯೊಂದಿಗೆ ಸಂಕ್ರಾಂತಿಯ ಹಾಡಿಗೆ ಕುಳಿತಲ್ಲಿಯೇ ಹೆಜ್ಜೆ ಹಾಕುವ ದೃಶ್ಯ ವಿಶೇಷವಾಗಿದ್ದು, ಕಬ್ಬು, ಜೋಳದ ರಾಶಿಯನ್ನು ಮಾಡಿ ವಿಶೇಷ ಪೂಜೆ ಮಾಡುವದರ ಜತೆಗೆ ಎಲ್ಲ ವಿದ್ಯಾರ್ಥಿಗಳಿಗೆ ಎಳ್ಳು-ಬೆಲ್ಲ ಹಂಚಿದರು, ಸಂಕ್ರಾಂತಿಯ ಕುರಿತ ಹಲವಾರು ಹಾಡುಗಳಿಗೆ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದ ವಿದ್ಯಾರ್ಥಿಗಳು, ಶಿಕ್ಷಕ-ಶಿಕ್ಷಕಿಯರು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ನಮ್ಮ ಶಾಲೆ ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿಲ್ಲ, ಇಲ್ಲಿ ಪಠ್ಯದಲ್ಲೂ ನಾವೆಲ್ಲರಿಗಿಂತ ಮುಂದಿದ್ದೇವೆ, ಜೊತೆಗೆ, ನಮಗೆ ಒಂದನೇಯ ತರಗತಿಯಿಂದಲೂ ನಮ್ಮ ಸಂಸ್ಕೃತಿಯ ಸೀರೆ ಉಟ್ಟುಕೊಳ್ಳುವದು, ಆರತಿ ಮಾಡುವದು, ಆರತಿ ಹಿಡಿಯುವದು, ಕುಂಭ ತಲೆಯ ಮೇಲೆ ಇಟ್ಟುಕೊಳ್ಳುವದು, ರಂಗೋಲಿ ಹಾಕುವುದರ ಜತೆಗೆ ನಮ್ಮ ಜಾನಪದ ಕಲೆ, ಆಚರಣೆಗಳನ್ನು ನಿರಂತರವಾಗಿ ಆಚರಿಸುತ್ತಾ ಬರುವದರಿಂದ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲು ನಮಗೆ ಹೆಮ್ಮೆ ಎನಿಸುತ್ತದೆ. ನಾವು ಇಂದು ಜೋಳದ ರಾಶಿಯಲ್ಲಿ ಕಬ್ಬು, ಬೇವು-ಬೆಲ್ಲದ ಸಂಭ್ರಮದೊಂದಿಗೆ ಸಂಕ್ರಾತಿಯ ಹಾಡಿಗೆ ಹಜ್ಜೆ ಹಾಕಿದ್ದು ಖುಷಿ ನೀಡಿತು"
ಸೌಮ್ಯ ಕಳ್ಳೆನ್ನವರ ವಿದ್ಯಾರ್ಥಿನಿ