ಹಾರೂಗೇರಿ 13: ಕುಡಚಿ ಮತಕ್ಷೇತ್ರದಾದ್ಯಂತ ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಿದ್ದು, ರಾತ್ರಿ ವೇಳೆಯಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದಿದ್ದಲ್ಲಿ ಸಾವಿರಾರು ರೈತರೊಂದಿಗೆ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಅಹೋರಾತ್ರಿ ಉಗ್ರ ಹೋರಾಟ ಮಾಡಲಾಗುವುದು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಎಚ್ಚರಿಕೆ ನೀಡಿದ್ದಾರೆ.
ಸಮೀಪದ ಅಲಖನೂರಿನ ಬೀರ್ಪನ ಮಡ್ಡಿಯಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ತೋಟದ ಮನೆಗಳಲ್ಲಿ ರಾತ್ರಿ ಪೂರ್ತಿ ವಿದ್ಯುತ್ ಸಮಸ್ಯೆಯಾಗುತ್ತಿರುವುದರಿಂದ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕತ್ತಲೆ ಆವರಿಸುತ್ತಿದೆ. ರೈತರಿಗೆ ಬೆಳೆಗಳಿಗೆ ನೀರು ಹಾಯಿಸಲಾಗುತ್ತಿಲ್ಲ ಎಂದರು.
ಹಾರೂಗೇರಿ, ಮುಗಳಖೋಡ, ಇಟ್ನಾಳ ಗ್ರಾಮದಲ್ಲಿ ಸರಿಯಾಗಿ ವಿದ್ಯುತ್ ಇಲ್ಲದೇ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ಮಾರ್ಚ 15ರೊಳಗೆ ರಾತ್ರಿಇಡೀ ಪೂರ್ಣ ವಿದ್ಯುತ್ ಪೂರೈಸದಿದ್ದಲ್ಲಿ, ಸಾವಿರಾರು ರೈತರೊಂದಿಗೆ ಹೆಸ್ಕಾಂ ಕಚೇರಿ ಮುಂದೆ ಅಹೋರಾತ್ರಿ ಉಗ್ರ ಹೋರಾಟ, ರಸ್ತೆಮೇಲೆ ಅಡುಗೆ ಮಾಡಲಾಗುತ್ತದೆ. ಎಲ್ಲರನ್ನೂ ಜೈಲಿಗೆ ಕಳಿಸಿದರೂ ಜೈಲಭರೋ ಚಳುವಳಿ ಹಮ್ಮಿಕೊಳ್ಳಲಾಗುವುದು. ಹೆಸ್ಕಾಂ ಅಧಿಕಾರಿಗಳಿಗೆ ರೈತರು, ವಿದ್ಯಾರ್ಥಿಗಳ ಬಗ್ಗೆ ಕಾಳಜಿಯಿದ್ದಲ್ಲಿ ಕುಡಚಿ ಮತಕ್ಷೇತ್ರದಲ್ಲಿ ಉಂಟಾದ ವಿದ್ಯುತ್ ಕ್ಷಾಮವನ್ನು ತಕ್ಷಣ ಬಗೆ ಹರಿಸಬೇಕು ಎಂದರು.
ಸರ್ಕಾರ ಆರ್ಥಿಕ ದಿವಾಳಿ : ಮುಖ್ಯಮಂತ್ರಿ ಸಿದ್ಧರಾಮಯ್ಯನವರು 1.15 ಲಕ್ಷಕೋಟಿ ಸಾಲದೊಂದಿಗೆ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಅಂಚಿಗೆ ತಂದಿದ್ದಾರೆ. ರಾಜ್ಯದ ಪ್ರತಿಯೊಬ್ಬರ ಮೇಲೆ ಲಕ್ಷರೂ ಸಾಲ ಹೊರಿಸಿದ್ದಾರೆ. ರಾಜ್ಯದಲ್ಲಿ ದಿನಬಳಕೆಯ ವಸ್ತುಗಳ ಬೆಲೆಯೇರಿಕೆಯಾಗಿದೆ. ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ. ಸಾಲಮಾಡಿ ನೌಕರರಿಗೆ ಸಂಬಳ ನೀಡಲಾಗುತ್ತಿದೆ. ಕಳೆದ ಎರಡು ವರ್ಷದಲ್ಲಿ ಕುಡಚಿ ಮತಕ್ಷೇತ್ರದಲ್ಲಿ ಒಂದೇ ಒಂದು ಮನೆ ಮಂಜೂರಾಗಿಲ್ಲ. ರಸ್ತೆಗಳು ಅಭಿವೃದ್ಧಿ ಕಾಣುತ್ತಿಲ್ಲ. ಶೈಕ್ಷಣಿಕವಾಗಿ ಪ್ರಗತಿ ಕಂಡಿಲ್ಲ.
ಒಡೆದು ಆಳುವ ನೀತಿ : ಕಾಂಗ್ರೆಸ್ ಸರ್ಕಾರಕ್ಕೆ ಎಲ್ಲ ವರ್ಗದವರನ್ನೊಳಗೊಂಡ ಸಮಗ್ರವಾದ ಅಭಿವೃದ್ಧಿ ಬಗ್ಗೆ ಯೋಚನೆಯಿಲ್ಲ. ಅಭಿವೃದ್ಧಿ ಶೂನ್ಯವಾಗಿದೆ. ಕಾಂಗ್ರೆಸ್ ಸರ್ಕಾರ ಜನರನ್ನು ಒಡೆದು, ಜಾತಿಯ ಬೀಜವನ್ನು ಬಿತ್ತುತ್ತಿದೆ. ಸೆಕ್ಯುಲರ ಎಂದು ಹೇಳಿ ಕೊಳ್ಳುವ ಕಾಂಗ್ರೆಸ್ ಅತೀ ಹೆಚ್ಚು ಜಾತಿ, ಜಾತಿ ಮದ್ಯೆ ವಿಷಬೀಜ ಬಿತ್ತಿ ಜನರನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತ ಬಂದಿದೆ.
ಸಚಿವರ ಪಲಾಯಣ : ಶಾಸಕರು ಅನುದಾನ ಕೇಳುತ್ತಾರೆಂದು ಸಚಿವರು ತಪ್ಪಿಸಿಕೊಂಡು ಶಾಸಕರ ಕೈಗೆ ಸಿಗುತ್ತಿಲ್ಲ. ಶಾಸಕರಿಗೆ ಅನುದಾನ ಕೊಡಲು ಸರ್ಕಾರದ ಬಳಿ ಹಣವಿಲ್ಲ. ಈ ಸರ್ಕಾರ ಪಾಪರ್ ಆಗಿದೆ.
ಕುಡಚಿ ಶಾಸಕರಿಗೆ ಟಾಂಗ್ : ಮೊನ್ನೆ ಸದನದಲ್ಲಿ ಕುಡಚಿ ಶಾಸಕರು ಮತಕ್ಷೇತ್ರದಲ್ಲಿ ರಸ್ತೆ ಅಗಲೀಕರಣದ ಬಗ್ಗೆ ಪ್ರಶ್ನೆಯನ್ನು ಕೇಳಿದರು. ಪ್ರಶ್ನೆ ಕೇಳಿದ ಶಾಸಕರಿಗೆ ಏನು ಪ್ರಶ್ನೆ ಎಂಬುದು ಗೊತ್ತಿಲ್ಲ. ಅದಕ್ಕೆ ಉತ್ತರಿಸಿದವರಿಗೂ ಪ್ರಶ್ನೆ ಅರ್ಥವಾಗಲಿಲ್ಲ. ಇದನ್ನ ಹೇಗೆ ನಿಭಾಯಿಸಬೇಕೆಂಬುದು ತಿಳಿಯದೇ ಸ್ಪೀಕರ್ ಸಮಯವನ್ನು ಕಳೆದರು.
ಬಿಜೆಪಿ ಬಣ ಜಗಳ : ಬಿಜೆಪಿಯಲ್ಲಿನ ಬಣ ಜಗಳಗಳು ಮತ್ತು ಇತರ ಗೊಂದಲಗಳಿಂದ ಕಾರ್ಯಕರ್ತರಿಗೆ ನೋವಾಗುತ್ತಿದೆ. ಕಾಂಗ್ರೆಸ್ನ್ನು ಸಮರಾ್ವಗಿ ಎದುರಿಸಲು ಕಾರ್ಯಕರ್ತರು, ಮುಖಂಡರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ವರಿಷ್ಠರು ಆದಷ್ಟು ಬೇಗ ಬಿಜೆಪಿಯಲ್ಲಿನ ಸಮಸ್ಯೆಗಳನ್ನು ಸರಿಪಡಿಸಲಿದ್ದಾರೆ.