ಟಿಡಿಎಸ್, ಜಿ.ಎಸ್.ಟಿ ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನೆ

ಸವದತ್ತಿ 13: ಶತಮಾನಗಳಿಂದ ದೇಶದಲ್ಲಿ ಸಹಕಾರಿ ಕ್ಷೇತ್ರವು ಸಾಕಷ್ಟು ಸೇವೆಯನ್ನು ಮಾಡಿಕೊಂಡು ಬಂದಿದ್ದು, ಈಗ ಈ ಕ್ಷೇತ್ರದ ಮೇಲೆ ಆದಾಯ ಮತ್ತು ಜಿಎಸ್ಟಿ ತೆರಿಗೆಯನ್ನು ಹೇರುತ್ತಿರುವುದು ಸಹಕಾರಿ ಕ್ಷೇತ್ರಕ್ಕೆ ಮಾರಕವಾಗಿದೆ ಎಂದು ಸಹಕಾರಿ ಸಂಘಗಳ ಹಾಗೂ ನೌಕರರ ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಬೇವೂರ ಹೇಳಿದರು.

ಸಹಕಾರಿ ಸಂಸ್ಥೆಗಳ ಮೇಲೆ ವಿಧಿಸಿರುವ ಆದಾಯ ತೆರಿಗೆ, ಟಿಡಿಎಸ್ ಹಾಗೂ ಜಿ.ಎಸ್.ಟಿಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ಸವದತ್ತಿ ತಾಲೂಕಾ ಸಹಕಾರಿ ಸಂಘಗಳ ಹಾಗೂ ನೌಕರರ ಒಕ್ಕೂಟದಿಂದ ಶುಕ್ರವಾರದಂದು ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವವಹಿಸಿ ಅವರು ಮಾತನಾಡಿದರು.

ಸಹಕಾರಿ ಸಂಘಗಳು ದೇಶದ ಆರ್ಥಿಕ ವ್ಯವಸ್ಥೆಗೆ ಅತ್ಯಮೂಲ್ಯ ಕೊಡುಗೆ ನೀಡಿದ್ದು, ಸಾರ್ವಜನಿಕ ಸೇವೆಯೆಂದು ಪರಿಗಣಿಸಿ ಮುನ್ನಡೆಯುತ್ತಿರುವ ಸಹಕಾರಿ ಸಂಘಗಳಿಗೆ ವಿಧಿಸಿರುವ ಆದಾಯ ಮತ್ತು ಜಿಎಸ್ಟಿಯ ನೀತಿಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.

ಪ್ರಧಾನ ಕಾರ್ಯದರ್ಶಿ ಸುರೇಶ ಮಾಗನೂರ ಮಾತನಾಡಿ, ಆದಾಯ ಮತ್ತು ಜಿಎಸ್ಟಿ ತೆರಿಗೆಗಳಿಂದ ರಾಜ್ಯದಲ್ಲಿನ 52ಸಾವಿರಕ್ಕೂ ಅಧಿಕ ಸಹಕಾರಿ ಸಂಘಗಳು ಹಿನ್ನೆಡೆಯನ್ನು ಅನುಭವಿಸುತ್ತಿದ್ದು, ಕೂಡಲೆ ಸಹಕಾರ ಸಂಘಗಳನ್ನು ತೆರಿಗೆಯಿಂದ ಮುಕ್ತಗೊಳಿಸಬೇಕೆಂದರು. ಕೋಟ್ಯಂತರ ಜನ ಸದಸ್ಯರಿರುವ ಸಹಕಾರಿ ಸಂಘಗಳಲ್ಲಿ ಲಕ್ಷಾಂತರ ಜನರಿಗೆ ಸಹಕಾರ ಕ್ಷೇತ್ರ ಉದ್ಯೋಗವನ್ನು ಕಲ್ಪಿಸಿದೆ. ಅಂತಹದರಲ್ಲಿ ಸಹಕಾರಿ ಸಂಘಗಳಿಗೆ ತೆರಿಗೆ ಭಾರವನ್ನು ಹೊರಿಸುವದರಿಂದ ಸಂಸ್ಥೆಗಳು ಅಭಿವೃದ್ದಿ ಹೊಂದದೆ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿವೆ ಎಂದರು. 

ಎಪಿಎಮ್ಸಿ ಹತ್ತಿರ ಶ್ರೀ ಉಳವಿ ಬಸವೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿದ ಸಹಕಾರಿಗಳು ಅಲ್ಲಿಂದ ಬೈಕ್ ರ್ಯಾಲಿ ಮೂಲಕ ಪ್ರತಿಭಟನೆ ನಡೆಸಿ ಮಿನಿವಿಧಾನಸೌಧ ತಲುಪಿ ಮನವಿ ಅಪರ್ಿಸಿದರು.

ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಸಹಕಾರಿ ಸಂಘಗಳ ಪರವಾಗಿ ತಹಸೀಲ್ದಾರ ಶಂಕರ ಗೌಡಿಯವರಿಗೆ ಅಪರ್ಿಸಲಾಯಿತು.

ಜಗದೀಶ ಹಳಮನಿ, ಕೆ.ಪಿ.ಅನಿಗೋಳ, ವಿರಾಜ ಕೊಳಕಿ, ಬಸವರಾಜ ಪುಟ್ಟಿ, ಮಂಜುನಾಥ ಡಬಕೆ, ಶಂಕರ ಗುಡಿ, ಧರ್ಮರಾಜ ಗಿರಿಜನ್ನವರ, ಮೋನೇಶ ಬಡಿಗೇರ, ರಮೇಶ ಮುನವಳ್ಳಿ, ಶಿವಾನಂದ ತಾರೀಹಾಳ, ಪಟ್ಟಣಶೆಟ್ಟಿ, ಸುನೀಲ ಕಿಟದಾಳ, ಪ್ರಭು ಪ್ರಭುನವರ, ಶೇಖರ ಅಣ್ಣಿಗೇರಿ ಹಾಗೂ ತಾಲೂಕಿನ ಎಲ್ಲ ಸಹಕಾರಿ ಸಂಘಗಳ ಸದಸ್ಯರು ಮತ್ತು ಸಿಬ್ಬಂದಿಯವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.