ಲೋಕದರ್ಶನ ವರದಿ
ರಾಯಬಾಗ 04: ಪಶುವೈದ್ಯೆಯ ಮೇಲೆ ಅತ್ಯಾಚಾರಗೈದು ನಿರ್ದಯವಾಗಿ ಸುಟ್ಟು ಹಾಕಿ ಕೊಲೆ ಮಾಡಿದ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಮಹಿಳೆಯರ ರಕ್ಷಣೆಗೆ ಕಠಿಣ ಕಾನೂನು ರಚಿಸಬೇಕೆಂದು ಆಗ್ರಹಿಸಿ ಪಟ್ಟಣದ ಝೇಂಡಾಕಟ್ಟೆ ಹತ್ತಿರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ನಿಂದ ಬುಧವಾರದಂದು ಪ್ರತಿಭಟನೆ ನಡೆಸಿದರು.
ಪಟ್ಟಣದಲ್ಲಿ ನೂರಾರು ಎಬಿವಿಪಿ ಸಂಘಟನೆ ವಿದ್ಯಾರ್ಥಿಗಳು ಪ್ರತಿಭಟನಾ ರ್ಯಾಲಿ ನಡೆಸಿ, ತಹಶೀಲ್ದಾರ ಡಿ.ಎಚ್.ಕೋಮಾರ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಪಶು ವೈದ್ಯೆಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಸುಟ್ಟು ಕೊಲೆ ಮಾಡಿ, ಪೈಶಾಚಿಕ ಕೃತ್ಯ ಎಸಗಿರುವ ಅತ್ಯಾಚಾರಿಗಳಿಗೆ ತ್ವರಿತವಾಗಿ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ನೀಡಬೇಕು. ಇನ್ನು ಮುಂದೆ ದೇಶದಲ್ಲಿ ಇಂಥ ಹೀನ ಕೃತ್ಯಗಳು ನಡೆಯದಂತೆ ಹಾಗೂ ಮಹಿಳೆಯರ ರಕ್ಷಣೆಗೆ ಕೇಂದ್ರ ಸರಕಾರ ಕಠಿಣ ಕಾನೂನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಪಟ್ಟಣದ ಝೇಂಡಾಕಟ್ಟೆ ಬಳಿ ಎಬಿವಿಪಿ ಸಂಘಟನೆ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯಿಂದ ಸುಮಾರು ಅರ್ಧಗಂಟೆ ಸಂಚಾರ ಅಸ್ತವ್ಯಸ್ತಗೊಂಡು, ವಾಹನ ಸವಾರರು ಪರದಾಡುವಂತಾಯಿತು.
ಪ್ರತಿಭಟನೆಯಲ್ಲಿ ಆರ್.ಬಿ.ಪಾಸನೆ, ನಾಗರಾಜ ನಾಯಿಕ, ಪೂಜಾ ಪಾಟೀಲ, ಹಣಮಂತ ಮಾಂಗ, ಸುನೀಲ ಮೊಳವಾಡ, ಧರೇಪ್ಪಾ ನಾಯಿಕವಾಡಿ, ರಾಕೇಶ ಕೆಂಪಟ್ಟಿ, ಪ್ರೇಮಾ ಲಂಗೊಟಿ, ಶಿವಾನಂದ ಪೂಜೇರಿ, ಏಕನಾಥ ಮಾಚಕನೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.