ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ: ನಾಲ್ವರ ಹತ್ಯೆ

ಪ್ರತಿಭಟನೆ

ಇಸ್ಲಾಮಾಬಾದ್‌ 27: ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬೆಂಬಲಿಗರು ನಡೆಸುತ್ತಿರುವ ಹಿಂಸಾಚಾರವನ್ನು ಹತ್ತಿಕ್ಕಲು ಸರ್ಕಾರ ಮತ್ತು ಸೇನೆ ನಡೆಸಿದ ಪ್ರತಿದಾಳಿಯಲ್ಲಿ ನೂರಾರು ಮಂದಿ ಹತ್ಯೆಗೀಡಾಗಿದ್ದಾರೆ ಎಂದು ಪಾಕಿಸ್ತಾನ್‌ ತೆಹ್ರೀಕ್‌–ಎ–ಇನ್ಸಾಫ್‌ ಪಕ್ಷ ಆರೋಪಿಸಿದೆ. ಆದರೆ, ಘಟನೆಯಲ್ಲಿ ಕೇವಲ ನಾಲ್ವರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸದ್ಯ ಇಸ್ಲಾಮಾಬಾದ್‌ ಸಹಜ ಸ್ಥಿತಿಗೆ ಮರಳಿದ್ದು, ಬಂದ್‌ ಮಾಡಲಾಗಿದ್ದ ರಸ್ತೆಗಳನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಮ್ರಾನ್‌ ಖಾನ್‌ ಬಿಡುಗಡೆಗೆ ಆಗ್ರಹಿಸಿ ಅವರ ಬೆಂಬಲಿಗರು ಕಳೆದ ಮೂರು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ಮಂಗಳವಾರ ಪ್ಯಾರಾ ಮಿಲಿಟರಿ ಪಡೆಯ ನಾಲ್ವರು ಯೋಧರು, ಇಬ್ಬರು ಪೊಲೀಸರು ಸೇರಿದಂತೆ ಒಟ್ಟು ಆರು ಮಂದಿ ಮೃತಪಟ್ಟಿದ್ದರು. ನೂರಕ್ಕೂ ಅಧಿಕ ಯೋಧರು ಗಾಯಗೊಂಡಿದ್ದರು.

ಪ್ರತಿಭಟನಕಾರರು ಇಸ್ಲಾಮಾಬಾದ್‌ ಪ್ರವೇಶಿಸದಂತೆ ಪೊಲೀಸರು ಲಾಹೋರ್‌ ಬಳಿ ಹೆದ್ದಾರಿಗಳಿಗೆ ಕಂಟೈನರ್‌ಗಳನ್ನು ಅಡ್ಡಲಾಗಿ ನಿಲ್ಲಿಸಿ, ರಸ್ತೆ ಬಂದ್‌ ಮಾಡಿದ್ದರು. ಆದರೆ, ಕ್ರೇನ್‌ನೊಂದಿಗೆ ಬಂದಿದ್ದ ಪ್ರತಿಭಟನಕಾರರು, ಕಂಟೈನರ್‌ಗಳನ್ನು ತೆರವುಗೊಳಿಸಿ ಮುನ್ನುಗ್ಗಿದ್ದಾರೆ.

ದೇಶದಾದ್ಯಂತ ನವೆಂಬರ್‌ 24ರಿಂದ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸುವಂತೆ ಇಮ್ರಾನ್‌ಖಾನ್‌ ಅವರು ನ.13ರಂದು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದರು.