ಹಾರೂಗೇರಿ 18: ಮಕ್ಕಳ ರಕ್ಷಣೆ ಹಾಗೂ ಭದ್ರತೆ ಪಾಲಕರು ಮತ್ತು ಶಿಕ್ಷಕರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿನಿಯರು ತಮ್ಮ ರಕ್ಷಣೆ ಹಾಗೂ ತಮ್ಮ ಮೇಲಿನ ಶೋಷಣೆಗಳ ವಿರುದ್ಧ ಮುಕ್ತವಾಗಿ ದೂರು ನೀಡಲು ಕಾನೂನಿನಲ್ಲಿ ಅವಕಾಶವಿದೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಮಹಾಂತೇಶ ಮುಗಳಖೋಡ ಹೇಳಿದರು.
ಪಟ್ಟಣದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹೆಣ್ಣುಮಕ್ಕಳ ರಕ್ಷಣೆ ಹಾಗೂ ಭಧ್ರತೆ ಕುರಿತ ಸಂಭ್ರಮ ಶನಿವಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಿ, ಪ್ರಸ್ತುತ ಸಮಾಜದಲ್ಲಿ ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳ ವಿರುದ್ಧ ಸೂಕ್ತ ಸಲಹೆ, ಮಾರ್ಗದರ್ಶನ ಮಾಡುವುದು ಅಗತ್ಯವಿದೆ. ಮಕ್ಕಳು ಶಾಲೆಗಳಲ್ಲಿ ಶಿಕ್ಷಕರು ಮತ್ತು ಮನೆಯಲ್ಲಿ ಪಾಲಕರ ಜೊತೆಗೆ ತಮ್ಮ ಸಮಸ್ಯೆಗಳ ಕುರಿತು ಹಿಂಜರಿಕೆಯಿಲ್ಲದೇ ಮುಕ್ತವಾಗಿ ಮಾತನಾಡಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿ.ಟಿ.ಬನಾಜನವರ ಮಾತನಾಡಿದರು. ಕ್ಷಕಿ ಅಕ್ಷತಾ ಕಾಂಬಳೆ ಕಾರ್ಯಕ್ರಮ ಸಂಯೋಜಿಸಿ, ವಿದ್ಯಾರ್ಥಿನಿಯರ ಸ್ನೇಹಿಯಾದ ಆಪ್ತ ಗೆಳತಿ ದೂರು ಪೆಟ್ಟಿಗೆ, ಮಕ್ಕಳ ಹಕ್ಕು ಮತ್ತು ರಕ್ಷಣೆಗಾಗಿ ಇರುವ ಸಹಾಯವಾಣಿ ಸಂಖ್ಯೆ, ಅಪರಿಚಿತರಿಂದ ದೂರವಿರುವ ಬಗ್ಗೆ ತಿಳಿಸಿದರು.
ಶಿಕ್ಷಕರಾದ ಎಂ.ಜಿ.ಜಿವಣೆ, ಪದ್ಮಾ ತೇರದಾಳ, ಪಿ.ಎಚ್.ಕೋಟಿ ಹಾಗೂ ಕಲಾವತಿ ಕಾಂಬಳೆ, ಪಲ್ಲವಿ ಕುಂಬಾರ, ಸ್ಪೂರ್ತಿ ದೊಡಮನಿ, ವರ್ಷಾ ಕುಳ್ಳೋಳ್ಳಿ, ವೈಷ್ಣವಿ ಗಸ್ತಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.