ಕೋಮುಪ್ರಚೋದನೆ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ; ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು, ಏ19, ಕೊರೋನಾ ರೋಗ ಹರಡುವಿಕೆಯಲ್ಲಿ ಧರ್ಮವನ್ನು ಎಳೆದು ಕೊಂಡು, ಒಂದು ಕೋಮಿನ ಜನರನ್ನು  ಗುರಿಯಾಗಿಸಿ ಅವರ ವಿರುದ್ಧ ಅಪಪ್ರಚಾರ ಮಾಡುವವರ ಮೇಲೆ ಕ್ರಮ ಜರುಗಿಸಿದ ಪೊಲೀಸ್  ಅಧಿಕಾರಿಗಳನ್ನೇ ವರ್ಗಾವಣೆ ಮಾಡಿರುವುದು ಖಂಡನೀಯ. ತಕ್ಷಣ ಸರ್ಕಾರ ತನ್ನ ನಿರ್ಧಾರ  ಬದಲಿಸಿ, ಕೋಮುಪ್ರಚೋದನೆ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೊರೊನಾ ರೋಗದ ಕಾರಣದಿಂದ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಆತಂಕದಲ್ಲಿದ್ದಾರೆ. ಈ ಆತಂಕವನ್ನು ದೂರ ಮಾಡಲು ಸರ್ಕಾರ ಕೂಡಲೇ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗಳ ಹಾಗೂ ಪರೀಕ್ಷೆ ದಿನಾಂಕಕ್ಕೆ ಸಂಬಂಧಪಟ್ಟ ಸೂಕ್ತ ಮಾಹಿತಿ ನೀಡಬೇಕು. ಜೀವ ಮತ್ತು ಜೀವನವನ್ನು ಉಳಿಸಿ, ಬೆಳೆಸಲು, ಹದಗೆಟ್ಟಿರುವ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಕೂಡಲೇ ರಾಜಕೀಯ ತಜ್ಞರು, ಆರ್ಥಿಕ ತಜ್ಞರು, ಉದ್ಯಮಿಗಳು, ಕಾರ್ಮಿಕ ಸಂಘಟನೆಗಳ ನಾಯಕರಗಳನ್ನು ಒಳಗೊಂಡಿರುವ ಕಾರ್ಯಪಡೆಯನ್ನು ರಚಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಲಾಕ್‍ಡೌನ್ ಅವಧಿಯಲ್ಲಿ ಸರ್ಕಾರದಿಂದ ಹಂಚಿಕೆ ಮಾಡುತ್ತಿರುವ ಆಹಾರ ಪದಾರ್ಥಗಳ ಕಿಟ್ ಮೇಲೆ ಆಡಳಿತ ಪಕ್ಷದ ನಾಯಕರುಗಳು ತಮ್ಮ ಪಕ್ಷದ ಚಿನ್ಹೆ ಹೊಂದಿರುವ ಲೇಬಲ್‍ಗಳನ್ನು ಅಂಟಿಸಿ ಮತದಾರರನ್ನು ಓಲೈಸಿಕೊಳ್ಳುವ ಹೀನ ರಾಜಕೀಯ ಪ್ರವೃತ್ತಿಯನ್ನು ತೋರುತ್ತಿದ್ದಾರೆ. ಇಂತಹ ಸರ್ಕಾರಿ ಸೌಲಭ್ಯಗಳ ದುರುಪಯೋಗವನ್ನು ತಡೆಯಬೇಕು.ಲಾಕ್‍ಡೌನ್ ಅವಧಿಯಲ್ಲಿ ನರೇಗಾ ಯೋಜನೆಯನ್ನು ಸ್ಥಗಿತಗೊಳಿಸಿದ ಕಾರಣ ನೋಂದಾಯಿತ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ, ಹಾಗಾಗಿ ಇವರಿಗೆ ಲಾಕ್‍ಡೌನ್ ಅವಧಿಯ ದಿನಗೂಲಿಯನ್ನು ಬ್ಯಾಂಕ್ ಖಾತೆಗಳಿಗೆ ಸರ್ಕಾರ ಜಮಾ ಮಾಡಬೇಕು ಮತ್ತು ಕೂಡಲೇ ನರೇಗಾ ಯೋಜನೆಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಕೆಲಸಕ್ಕೆ ಅವಕಾಶ ಮಾಡಿಕೊಡಬೇಕು. ಲಾಕ್‍ಡೌನ್ ಅವಧಿಯಲ್ಲಿ ಎಲ್ಲಾ ಅಸಂಘಟಿತ ವಲಯದ ಕಾರ್ಮಿಕರು, ಕೂಲಿಕೆಲಸಗಾರರು ಹಾಗೂ ಬಡವರಿಗೆ ತಲಾ ಪ್ರತಿ ತಿಂಗಳು ಕನಿಷ್ಠ 10 ಕೆ.ಜಿ. ಅಕ್ಕಿ, ಹಾಲು, 2 ಲೀಟರ್ ಅಡುಗೆ ಎಣ್ಣೆ, ತರಕಾರಿ ಮುಂತಾದ ಅಗತ್ಯ ಪದಾರ್ಥಗಳನ್ನು ಪ್ರತಿ ತಿಂಗಳ ಮೊದಲ ವಾರ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.