ಹವ್ಯಾಸಕ್ಕೋ ಅಥವಾ ಆಟೋಟದ ಖುಷಿಗೋ ಅಲ್ಲ!
ಮುಂಡಗೋಡ 06: ಪಟ್ಟಣದ ಪ್ರೀತಂ, ಹಾಗೂ ಪ್ರಥಮ ಇಬ್ಬರು ಹುಡುಗರು ಸ್ಕೇಟಿಂಗ್ ಮಾಡ್ತಿರೋದು ತಮ್ಮ ಹವ್ಯಾಸಕ್ಕೋ ಅಥವಾ ಆಟೋಟದ ಖುಷಿಗೋ ಅಲ್ಲ! ಜನ ಜಾಗೃತಿಗೆ ಅದರಲ್ಲೂ ರಸ್ತೆ ಜಾಗೃತಿ ಮೂಡಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಕಾಶಿನಾಥ್ ಎಂಬ ಪೋಲೀಸ್ ಇಲಾಖೆಯ ಸಿಬ್ಬಂದಿಯ ಮಕ್ಕಳು ಇಬ್ಬರೂ ಕೂಡ ತಾಲೂಕಿನ ಲೋಯಲಾ ವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ತಮಗಿರುವ ಬಿಡುವಿನ ವೇಳೆಯಲ್ಲಿ ಇವರು ಸ್ಕೇಟಿಂಗ್ ಮೂಲಕ ಜಾಗೃತಿ ಕಾರ್ಯಕ್ರಮ ಮಾಡುತ್ತಾರೆ. ಒಬ್ಬನು ಪ್ರೀತಂ ಕುಮಾರ್ ಈತ 8 ನೇ ತರಗತಿ ಓದುತ್ತಿದ್ದಾನೆ, ಪ್ರತೀಕ್ ಮೂರನೇ ತರಗತಿ ಓದುತ್ತಿದ್ದಾನೆ. ಇಬ್ಬರೂ ಸ್ಕೇಟಿಂಗ್ನಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುಗಳಾಗಿ ಭಾಗವಹಿಸಿ ಖ್ಯಾತಿ ಪಡೆದಿದ್ದಾರೆ.
ಈ ಬಾರಿ ಅವರು ಆಯ್ದುಕೊಂಡಿದ್ದು ರಸ್ತೆ ಜಾಗೃತಿಯನ್ನು! ಬಟ್ಟೆ ಮೇಲೆ ರಸ್ತೆ ಸುರಕ್ಷತಾ ನಿಯಮಗಳನ್ನು ಪ್ರಿಂಟ್ ಹಾಕಿಸಿಕೊಂಡು ರೋಡ್, ವಾಹನ, ಸುರಕ್ಷತಾ ಪರಿಕರಗಳ ಬಗ್ಗೆ ಮಾಹಿತಿಯನ್ನು ತಮ್ಮ ಡ್ರೆಸ್ ಮೇಲೆಯೇ ಅಚ್ಚು ಮಾಡಿಕೊಂಡು ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಕಂಬಾರುಗಟ್ಟಿಯವರೆಗೆ ಸ್ಕೇಟ್ ಮಾಡಿದರು. ತನ್ನ ತಂದೆ ದಿನ ಬಂದು ಹೆಲ್ಮೇಟ್, ಸೀಟ್ ಬೆಲ್ಟ್ ಇತ್ಯಾದಿಗಳಿಲ್ಲದೇ ಘಟಿಸುವ ಅಪಘಾತಗಳ ಬಗ್ಗೆ ಹೇಳುವುದು ಮನಕ್ಕೆ ಮುಟ್ಟಿ ಈ ರೀತಿ ಪರಿಕಲ್ಪನೆಯೊಂದಿಗೆ ಸ್ಕೇಟಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಮಕ್ಕಳ ಸಮಾಜ ಪ್ರೀತಿಗೆ ಜನರು ಖುಷಿ ವ್ಯಕ್ತಪಡಿಸಿದ್ದಾರೆ.