ಪ್ರವಾಹ ಪರಿಹಾರ ಕೋರಿ ಪ್ರಧಾನಿ ನರೇಂದ್ರ ಮೋದಿ ಭೇಟಿ : ಎಚ್ ಡಿ ಕುಮಾರಸ್ವಾಮಿ

ಸಂಕೇಶ್ವರ,ಆ 10    ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು ರಾಜ್ಯಕ್ಕೆ ಪ್ರಾಮಾಣಿಕವಾಗಿ ಹೆಚ್ಚಿನ ನೆರವು ನೀಡಬೇಕು ಸಾಧ್ಯವಾದರೆ ಪ್ರಧಾನಿ ಹಾಗೂ ಗೃಹ ಸಚಿವರನ್ನು ಭೇಟಿ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. 

ಇಲ್ಲಿನ ಹಿರಣ್ಯಕೇಶಿ ನದಿ ಪ್ರವಾಹ ಸಂತ್ರಸ್ಥರ  ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಸಂಬಂಧ ಹೆಚ್ಚಿನ ಪರಿಹಾರ ಕೋರಿ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ. ನಿರಾಶ್ರಿತ ಕುಟುಂಬಗಳಿಗೆ ಹೊಸ ಬದುಕನ್ನು ಕಟ್ಟಿಕೊಡುವ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಸರ್ಕಾರ ಸಾಧ್ಯವಾದ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. 

ಕಳೆದ ವರ್ಷ ಮೈತ್ರಿ ಸರ್ಕಾರದ ಅವಧಿಯಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರವಾಹ ಹಾಗೂ ಭೂಕುಸಿತದ ಸಂರ್ಭದಲ್ಲಿ ಕೈಗೊಂಡ ಮಾದರಿಯಲ್ಲಿ ತ್ವರಿತ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಯಡಿಯೂರಪ್ಪ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದೇನೆ. ಮುಖ್ಯಮಂತ್ರಿ ಅವರು ಪ್ರತಿಪಕ್ಷ ಮುಖಂಡರ ಸಭೆ ಕರೆದು ಅಭಿಪ್ರಾಯ ಪಡೆಯತ್ತಾರೆ ಎಂದು ಭಾವಿಸಿದ್ದೇನೆ. ರಾಜ್ಯದಲ್ಲಿ ಪೂರ್ಣಪ್ರಮಾಣದ ಸರ್ಕಾರ ಇಲ್ಲದಿದ್ದರೂ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಯಡಿಯೂರಪ್ಪ ಭಾರೀ ಪ್ರಯಾಸದಿಂದ ಬಿಜೆಪಿ ಸರ್ಕಾರ ರಚನೆ ಮಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದು, ಕೇಂದ್ರ ಸರ್ಕಾರ ಪ್ರಾಮಾಣಿಕ ಹಾಗೂ ಉದಾರವಾಗಿ  ನೆರವು ನೀಡಬೇಕುಎಂದರು.  

ಬೆಳಗಾವಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ರಾಜ್ಯವನ್ನು ಪ್ರತಿನಿಧಿಸುವ ರಾಜ್ಯಸಭಾ ಸದಸ್ಯರು ಹಾಗೂ ಕೇಂದ್ರ ಹಣಕಾಸು ಸಚಿವರಾಗಿದ್ದಾರೆ. ಸಹಜವಾಗಿಯೇ ಹೆಚ್ಚಿನ ನೆರವು ನೀಡುವ ಭರವಸೆ ಇದೆ ಎಂದು ಹೇಳಿದರು. 

ಪ್ರವಾಹ ರಕ್ಷಣಾ ಕಾರ್ಯಾಚರಣೆ ವೇಳೆ ಆರಂಭಿಕ ಹಂತದಲ್ಲಿ ಬಿಜೆಪಿಯವರು ಸ್ವಲ್ಪ ಎಡವಿದ್ದಾರೆ. ಯಡಿಯೂರಪ್ಪ ಅವರು ಕೇಂದ್ರದ ಗೃಹ ಸಚಿವರ ಜೊತೆ ಮಾತನಾಡಿ ಕನಿಷ್ಟ 4-5 ಹೆಲಿಕಾಪ್ಟರ್ ತರಿಸಿಕೊಂಡಿದ್ದರೆ ಪರಿಹಾರ ಕಾರ್ಯಾಚರಣೆಗೆ ಹೆಚ್ಚು ಅನುಕೂಲವಾಗುತ್ತಿತ್ತು. ಮೈತ್ರಿ ಸರ್ಕಾರದ ಅವಧಿಯಲ್ಲಿ ಕೊಡಗು ಪ್ರವಾಹ ಸಂದರ್ಭದಲ್ಲಿ 24 ಗಂಟೆಯಲ್ಲಿ ಹೆಲಿಕಾಪ್ಟರ್ ತರಿಸಿಕೊಂಡಿದ್ದೇವು ಎಂದರು. 

ರಾಜ್ಯದ 10 -15 ಜಿಲ್ಲೆಗಳಲ್ಲಿ ತೀವ್ರ ಪ್ರವಾಹವಿದೆ. ಕನಿಷ್ಟ 10 ಹೆಲಿಕಾಪ್ಟರ್ ಗಳನ್ನು  ತರಿಸಿಕೊಳ್ಳಬೇಕಾಗಿತ್ತು. ಕೇಂದ್ರ ಸರ್ಕಾರವೇನೂ ಹೆಲಿಕಾಪ್ಟರ್ ಗಳನ್ನು  ಉಚಿತವಾಗೇನೂ ನೀಡುವುದಿಲ್ಲ. ಅದಕ್ಕೂ ರಾಜ್ಯ ಸರ್ಕಾರ ಹಣವನ್ನು ಪಾವತಿ ಮಾಡುತ್ತದೆ ಎಂದರು.  

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಸಂಕೇಶ್ವರ ಕಲ್ಯಾಣ ಮಂಟಪದಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಬೇಟಿ ನೀಡಿದ ಕುಮಾರಸ್ವಾಮಿ, ಹಿರಣ್ಯಕೇಶಿ ನದಿ ಪ್ರವಾಹದದಿಂದ  ಮನೆ, ಆಸ್ತಿ ಬೆಳೆ ಜಾನುವಾರುಗಳನ್ನು ಕಳೆದುಕೊಂಡ ನಿರಾಶ್ರಿತರಿಗೆ ಸಾಂತ್ವನ ಹೇಳಿದರು. 

ನಿಮ್ಮ ಪರವಾಗಿ ನಾವಿದ್ದು, ನೀವೆಲ್ಲಾ ಧೈರ್ಯದಿಂದ ಇರಿ ಎಂದು ಅಭಯ ನೀಡಿದರು.