ಪ್ರಸ್ತುತ ಜಾಗತಿಕ ಸಮಸ್ಯೆಗಳ ಪರಿಹಾರಾರ್ಥ ವಿಷಯ ಮಂಡಿಸಿ: ಅಡಿಗ

ರಾಣಿಬೆನ್ನೂರ 16: ಪ್ರಸ್ತುತ ಜಾಗತಿಕ ಸಮಸ್ಯೆಗಳಾದ ನೀರಿನ ಬಿಕ್ಕಟ್ಟು, ಹವಾಮಾನ ವೈಪರೀತ್ಯ ಮತ್ತು ಪ್ರಕೃತಿ ವಿಕೋಪಗಳ ಸವಾಲುಗಳಿಗೆ ಪರಿಹಾರ ರೂಪದಲ್ಲಿ ತಮ್ಮ ವಿಷಯ ಮಂಡನೆ ಮಾಡಬೇಕು. ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳಸುವುದು. ಮುಂದಿನ ದಿನಗಳಲ್ಲಿ ಯುವಕರಿಗೆ ಪರಿಹಾರ ಕ್ರಮಗಳ ಬಗ್ಗೆ ಸಂಶೋಧನಾ ಮಾರ್ಗಗಳನ್ನು ಕೈಗೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ ಹೇಳಿದರು. 

ಇಲ್ಲಿನ ವಿದ್ಯಾನಗರದ ಡಾ.ಬಿ.ಆರ್‌.ಅಂಬೇಡ್ಕರ್ ಪ್ರೌಢ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾವೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಡಾ. ಬಿ.ಆರ್‌.ಅಂಬೇಡ್ಕರ್ ಸ್ಕೂಲ್, ತಾಲ್ಲೂಕು ವಿಜ್ಞಾನ ಮತ್ತು ಗಣಿತ ವಿಷಯ ವೇದಿಕೆಯ ಆಶ್ರಯದಲ್ಲಿ ಏರ್ಪಡಿಸಿದ ಪ್ರೌಢ ಶಾಲಾ ಮಕ್ಕಳ ತಾಲ್ಲೂಕು ಮಟ್ಟದ ವಿಜ್ಞಾನ ಗೋಷ್ಠಿ ಮತ್ತು ವಿಜ್ಞಾನ ನಾಟಕ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ನೂರು ಪುಸ್ತಕಗಳ ಸಾರವನ್ನು ಪ್ರೇಕ್ಷಕರ ಮಸ್ತಕದಲ್ಲಿ ಮನದಟ್ಟು ಮಾಡುವ ಅದ್ಬುತ ಶಕ್ತಿ ನಾಟಕ ಕಲೆಯಲ್ಲಿ ಅಡಗಿದೆ. ಕಲೆ ಮತ್ತು ವಿಜ್ಞಾನ ನಡುವೆ ನಿಕಟವಾದ ಸಂಬಂಧವಿದ್ದು ಆಯೋಜಿಸಿರುವ ವಿಜ್ಞಾನ ನಾಟಕ ಸ್ಪರ್ಧೆ ವಿದ್ಯಾರ್ಥಿಗಳಿಗೆ ಜ್ಞಾನದ ಪ್ರಭೆಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಪಾತ್ರ ವಹಿಸಲಿದೆ ಎಂದರು. 

ಕ್ಷೇತ್ರ ಸಮನ್ವಾಧಿಕಾರಿ ಮಂಜ ನಾಯಕ ಮಾತನಾಡಿ, ನಾಟಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನು ವೇದಿಕೆಗೆ ತರುವುದರ ಮೂಲಕ ಭಯ ಹೋಗಲಾಡಿಸುವುದು. ವೈಜ್ಞಾನಿಕ ಚಟುವಟಕೆಗಳನ್ನು ಮಾಡಿಸಿ ಉದಯೋನ್ಮುಖ ವಿಜ್ಞಾನಿಗಳನ್ನು ತಯಾರು ಮಾಡಬೇಕು ಎಂದು ಶಿಕ್ಷಕರಿಗೆ ತಿಳಿಸಿದರು. 

ಡಯಟ್‌ಉಪನ್ಯಾಸಕಿ ವಿಜಯ ಪಾಟೀಲ, ಮುಖ್ಯಶಿಕ್ಷಕಿ ಜಯಲಲಿತಾ ಹೊಸಮನಿ, ನೋಡಲ್ ಶಿಕ್ಷಣ ಸಂಯೋಜಕ ಎಂ.ಎಂ. ಮಾಗನೂರ, ವಿಜ್ಞಾನ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭು ಯರೇಶೀಮಿ, ಬಿಆರ್‌ಪಿ ನಾಗರಾಜ್, ರಮೇಶ ಅಳಲಗೇರಿ ಹಾಗೂ ವಿಜ್ಞಾನ ಶಿಕ್ಷಕರು ಮತ್ತು ವಿವಿಧ ಶಾಲೆಗಳ 125 ವಿದ್ಯಾರ್ಥಿಗಳು ಭಾಗವಹಿಸಿದ್ದರು.