ಗ್ರಾಹಕರ ಸಂವಾದ ಸಭೆ ಸಮಸ್ಯೆಗಳ ಶೀಘ್ರ ಇತ್ಯರ್ಥಕ್ಕೆ ಪ್ರವೀಣಕುಮಾರ ಚಿಕ್ಕಾಡೆ ಸೂಚನೆ

ಗ್ರಾಹಕರ ಸಂವಾದ ಸಭೆ ಸಮಸ್ಯೆಗಳ ಶೀಘ್ರ ಇತ್ಯರ್ಥಕ್ಕೆ ಪ್ರವೀಣಕುಮಾರ ಚಿಕ್ಕಾಡೆ ಸೂಚನೆ Praveen Kumar Chikkade instructs for speedy resolution of customer dialogue issues

ಸವದತ್ತಿ 16 : ನಗರದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಕಾರ್ಯ ಹಾಗೂ ಪಾಲನೆ ಉಪವಿಭಾಗದ ವತಿಯಿಂದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವ ಉದ್ದೇಶದಿಂದ ಗ್ರಾಹಕರ ಸಂವಾದ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಬೆಳಗಾವಿಯ ಅಧೀಕ್ಷಕ ಅಭಿಯಂತರು ಮಾರ್ಗದರ್ಶನದಲ್ಲಿ ನಡೆದ ಈ ಸಭೆಯ ಅಧ್ಯಕ್ಷತೆಯಲ್ಲಿ ಪ್ರವೀಣಕುಮಾರ ಚಿಕ್ಕಾಡೆ ಅವರು ವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ಅವರು ಶುಕ್ರವಾರದಂದು ಲೋಕ ದರ್ಶನ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಹದಗೆಟ್ಟ ಹೆಸ್ಕಾಂ ಕಚೇರಿ ಮುಂಭಾಗದ ರಸ್ತೆ ಸಾರ್ವಜನಿಕರಿಗೆ ನರಕಯಾತನೆ ಎಂಬ ಸುದ್ದಿಯನ್ನು ಗಮನಿಸಿದ್ದೇನೆ.  

ಈ ಸಮಸ್ಯೆಯನ್ನು ಆದಷ್ಟು ಬೇಗನೆ ಸರಿಪಡಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು, ಎಂದು ಭರವಸೆ ನೀಡಿದರು.ನಂತರ ಸವದತ್ತಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಹಕರಿಂದ ವಿದ್ಯುತ್ ಸಮಸ್ಯೆಗಳು, ಬಿಲ್ಲಿಂಗ್ ತೊಂದರೆಗಳು, ಹೊಸ ವಿದ್ಯುತ್ ಸಂಪರ್ಕ ಹಾಗೂ ವಿದ್ಯುತ್ ಸರಬರಾಜಿನಲ್ಲಿನ ವ್ಯತ್ಯಯಗಳ ಕುರಿತು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಯಿತು. 

ಗ್ರಾಹಕರ ದೂರುಗಳನ್ನು ಅತ್ಯಂತ ಕಾಳಜಿಯಿಂದ ಆಲಿಸಿದ ಪ್ರವೀಣಕುಮಾರ ಚಿಕ್ಕಾಡೆ ಅವರು, ಸಾರ್ವಜನಿಕರ ಸಮಸ್ಯೆಗಳನ್ನು ಯಾವುದೇ ವಿಳಂಬವಿಲ್ಲದೆ ಶೀಘ್ರವಾಗಿ ಇತ್ಯರ್ಥಪಡಿಸುವಂತೆ ಸಂಬಂಧಪಟ್ಟ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಸ್ಥಳದಲ್ಲೇ ಕಡಾಖಂಡಿತ ಸೂಚನೆ ನೀಡಿದರು. ಇದೇ ವೇಳೆ ಹೆಸ್ಕಾಂ ಇಲಾಖೆಯ ವಿವಿಧ ಜನಪರ ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ಗ್ರಾಹಕರಿಗೆ ಸವಿಸ್ತಾರವಾದ ಮಾಹಿತಿ ನೀಡಲಾಯಿತು.ಈ ಸಂದರ್ಭದಲ್ಲಿ ಹೆಸ್ಕಾಂ ಉಪವಿಭಾಗದ ಹಿರಿಯ ಎಇಇ ಎಮ್‌.ಎಸ್‌. ವಿಶಾಪೂರಕರ, ಪಟ್ಟಣ ಶಾಖಾ ಅಧಿಕಾರಿ ಅಕ್ಬರಹುಸೇನ ಮಕಾನದಾರ ಸೇರಿದಂತೆ ಇಲಾಖೆಯ ಇತರ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಹಾಗೂ ಸವದತ್ತಿ ಸುತ್ತಮುತ್ತಲಿನ ಗ್ರಾಹಕರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.